ಹುಣಸೋಡು ಜಿಲೆಟಿನ್ ಸ್ಪೋಟ ಪ್ರಕರಣ: ತಪ್ಪಿತಸ್ಥರ ವಿರುದ್ದ ಕ್ರಮಕ್ಕೆ ಸಿದ್ದರಾಮಯ್ಯ ಆಗ್ರಹ

ಬೆಂಗಳೂರು: ಶಿವಮೊಗ್ಗದ ಹುಣಸೋಡು ಜೆಲೆಟಿನ್ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿ ವಿಧಾನ ಸೌಧದಲ್ಲಿ ನಿಲುವಳಿ ಸೂಚನೆಯ ಅಡಿಯಲ್ಲಿ ಘಟನೆಯ ಬಗ್ಗೆ ವಿವರಿಸಿದ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ಈ ಘಟನೆಯಲ್ಲಿ ಯಾರೇ ತಪ್ಪಿತಸ್ಥರಿದ್ದರು ಅವರನ್ನು ಶಿಕ್ಷಿಸಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.
ಚರ್ಚೆ ವೇಳೆ ನಾನು ಆ ಸ್ಥಳಕ್ಕೆ ಭೇಟಿ ನೀಡಿದ್ದೆ ಎಂದ ಸಿದ್ದರಾಮಯ್ಯ, ಅಲ್ಲಿ ಅಕ್ರಮವಾಗಿ ಸ್ಫೋಟಕವನ್ನು ಸಂಗ್ರಹ ಮಾಡಲಾಗಿತ್ತು. ಭೇಟಿ ಕೊಟ್ಟಿದ್ದಾಗ 97 ಕ್ರಷರ್ಗಳಿಗೆ ಅನುಮತಿ, 76 ಕ್ವಾರೆಗಳಿಗೆ ಅವಕಾಶ, ಈ ಪೈಕಿ 23 ಕ್ವಾರೆಗಳಿಗೆ ಬ್ಲಾಸ್ಟ್ಗೆ ಅವಕಾಶ ಕೊಟ್ಟಿರುವುದಾಗಿ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಅಕ್ರಮ ಗಣಿಗಾರಿಕೆ ನಿಲ್ಲಿಸಲು ಜಿಲ್ಲಾಡಳಿತ ಯಾವುದೇ ಕ್ರಮ ಕೈಗೊಂಡಿಲ್ಲ ಎಂದರು.
ಅಕ್ರಮ ಗಣಿಗಾರಿಕೆ ಮುಚ್ಚಲು ಸ್ಥಳೀಯರು ಅರ್ಜಿ ಕೊಟ್ಟಿದ್ದಾರೆ ಎಂದ ಅವರು, ಆದರೂ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ. ಸ್ಫೋಟಕ ಕಾಯ್ದೆ ನಿಯಮಾವಳಿಗಳ ಪಾಲನೆ ಆಗಿಲ್ಲ. ಸ್ಫೋಟಕ ವಸ್ತುಗಳ ಬಳಕೆ, ಸಾಗಾಟ, ಶೇಖರಣೆಗೆ ಪರವಾನಗಿ ಅಗತ್ಯ. ಆದರೆ ಯಾವುದೇ ಪರವಾನಗಿ ಪಡೆದಿಲ್ಲ ಎಂಬುದು ಸ್ಪಷ್ಟವಾಗಿದೆ. ಈ ನಿಟ್ಟಿನಲ್ಲಿ ಹುಣಸೋಡು ಸ್ಫೋಟ ಪ್ರಕರಣದ ಹೊಣೆಯನ್ನು ಸರ್ಕಾರ, ಜಿಲ್ಲಾಡಳಿತ, ಹಾಗೂ ಸ್ಫೋಟಕ ತೆಗೆದುಕೊಂಡು ಬಂದವರು ಹೊರಬೇಕು ಎಂದು ಆಗ್ರಹಿಸಿದರು.
ಗಣಿಗಾರಿಕೆ ಬಗ್ಗೆ ದೂರುಗಳು ಇದ್ದಲ್ಲಿ ಕೂಡಲೇ ಎಲ್ಲ ಗಣಿಗಾರಿಕೆ ಲೈಸನ್ಸ್ ರದ್ದು ಮಾಡಬೇಕು ಎಂದ ಸಿದ್ದರಾಮಯ್ಯ, ರಾಜ್ಯದಲ್ಲಿ 2000 ಕ್ಕೂ ಮಿಕ್ಕಿ ಅಕ್ರಮ ಗಣಿಗಾರಿಕೆಗಳಿವೆ. ಈ ಅಕ್ರಮ ಗಣಿಗಾರಿಕೆಯನ್ನು ಕೂಡಲೇ ರದ್ದು ಮಾಡಬೇಕು. ಹುಣಸೋಡ ಸ್ಫೋಟ ಘಟನೆ ಕುರಿತಾಗಿ ಹೈಕೋರ್ಟ್ ಹಾಲಿ ನ್ಯಾಯಾಧೀಶರಿಂದ ತನಿಖೆ ಆಗಬೇಕು ಎಂದು ಆಗ್ರಹಿಸಿದರು.