ಇಸ್ತಾಂಬುಲ್: ಬಿಸಿನೀರಿನ ಬುಗ್ಗೆಗಳು ಮತ್ತು ಸುಣ್ಣದಕಲ್ಲಿನ ಮಹಡಿಗಳನ್ನು ಹೊಂದಿರುವ ಸುಂದರ ತಾಣವೇ ಪಮುಕ್ಕಾಲೆ. ಸುಮಾರು 4 ಲಕ್ಷ ವರ್ಷಗಳ ಹಿಂದೆ ಏಷ್ಯಾದಲ್ಲಿ ಸಾಕಷ್ಟು ಸರಣಿ ಭೂಕಂಪಗಳು ಸಂಭವಿಸುತ್ತಿದ್ದವು. ಈ ಸರಣಿ ಭೂಕಂಪಗಳು ಟರ್ಕಿಯಲ್ಲಿ ಹರಿಯುತ್ತಿದ್ದ ಮೆಂಡರಸ್ ಎಂಬ ನದಿಯ ಹರಿವನ್ನು ಕಣಿವೆಯತ್ತ ಬದಲಿಸಿದವು. ಕಣಿವೆಯತ್ತ ಹರಿದ ನದಿಯ ನೀರಿನ ಮೇಲ್ಮೈ ಬಿಸಿಯಾಗತೊಡಗಿತು. ಹೀಗೆ ಉಂಟಾದ ಬಿಸಿನೀರು ವೇಗವಾಗಿ ಹರಿಯತೊಡಗಿತು. ಮುಂದೆ ಈ ನೀರು ಬಿಸಿಲಿನ ಶಾಖಕ್ಕೆ ಆವಿಯಾಗಿ ಅಲಂಕಾರಿಕ ಸುಣ್ಣದಕಲ್ಲಿನ ರಚನೆಯಾಗಿ ಮಾರ್ಪಾಡು ಹೊಂದಿತು. ಕಾರ್ಬೋನೇಟ್ ಕ್ಯಾಲ್ಶಿಯಂ ಅಂಶ ಈ ನೀರಿನಲ್ಲಿ ಹೆಚ್ಚಾಗಿದ್ದ ಪರಿಣಾಮ ಈ ರಚನೆಗಳು ಉಂಟಾದವು ಎಂದು ಸಂಶೋಧನೆಗಳು ಹೇಳುತ್ತವೆ.

ಈ ರಚನೆ ದೂರದಿಂದ ಥೇಟ್ ಹತ್ತಿಯ ಕೋಟೆಯಂತೆ ಕಾಣುವುದರಿಂದ ಇದಕ್ಕೆ ಪಮುಕ್ಕಾಲೆ ಎಂಬ ಹೆಸರು ಬಂದಿತು. ಟರ್ಕಿ ಭಾಷೆಯಲ್ಲಿ ಪಮುಕ್ಕಾಲೆ ಎಂದರೆ ಹತ್ತಿಯ ಕೋಟೆ ಎಂದರ್ಥ. ಇಲ್ಲಿ ಒಟ್ಟು 17 ಬಿಸಿನೀರಿನ ಬುಗ್ಗೆಗಳಿವೆ. ಈ ಬುಗ್ಗೆಗಳ ನೀರು 35 ಡಿಗ್ರೀ ಸೆ. ನಿಂದ 100 ಡಿಗ್ರೀ ಸೆ. ವರೆಗೂ ಬಿಸಿಯಿರುತ್ತದೆ. ಇಷ್ಟೆಲ್ಲ ವಿಶೇಷತೆಗಳನ್ನು ಹೊಂದಿರುವ ಈ ತಾಣ ಪ್ರವಾಸಿಗರ ಪಾಲಿಗೆ ನೆಚ್ಚಿನ ತಾಣ. ಕೇವಲ ಟರ್ಕಿ ಮಾತ್ರವಲ್ಲದೇ ವಿದೇಶಗಳಿಂದಲೂ ಪಮುಕ್ಕಾಲೆ ವೀಕ್ಷಿಸಲು ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಾರೆ. ಇದು ಯುನೆಸ್ಕೋದ ವಿಶ್ವ ಪರಂಪರೆಯ ತಾಣಗಳ ಪಟ್ಟಿಯಲ್ಲಿದೆ.
ಇನ್ನು, ಈ ಬೆಟ್ಟದ ಮೇಲೊಂದು ಪುಟ್ಟ ಊರಿದೆ. ಈ ಊರಿಗೆ ಪಮುಕ್ಕಾಲೆಯ ಬಿಸಿನೀರಿನ ಬುಗ್ಗೆಗಳೇ ಅನಾರೋಗ್ಯದ ಚಿಕಿತ್ಸಕಗಳಾಗಿದ್ದವು. ಈ ಕಾರಣದಿಂದಲೇ ಈ ಊರಿನಲ್ಲಿ ಸಾಕಷ್ಟು ದೇವಾಲಯಗಳು ನಿರ್ಮಾಣವಾದವು. ಈ ಹೈರಾಪೊಲಿಸ್ ಎಂಬ ಹಳ್ಳಿ ಪವಿತ್ರ ನಗರಿ ಎನಿಸಿತು. ಆದರೆ ಸರಣಿ ಭೂಕಂಪಗಳು ಈ ಊರನ್ನು ನಾಶ ಮಾಡಿದವು. ಆದರೆ ರೋಮನ್ನರು ಹೈರಾಪೊಲಿಸ್ ನ್ನು ಮರುನಿರ್ಮಾಣ ಮಾಡಿದರು. ಆದರೆ ಮತ್ತೆ ಉಂಟಾದ ಭೂಕಂಪಗಳು ಈ ಗ್ರಾಮವನ್ನು ಮತ್ತೆ ನೆಲಸಮ ಮಾಡಿದವು. ಆದರೆ ಇಂದಿಗೂ ಹೈರಾಪೊಲಿಸ್ ನ ಅವಶೇಷಗಳು ಇಲ್ಲಿವೆ.
ಇಷ್ಟೆಲ್ಲ ವಿಶೇಷತೆಗಳಿಂದ ಕೂಡಿರುವ ಪಮುಕ್ಕಾಲೆಗೆ ನೀವೂ ಒಮ್ಮೆ ಭೇಟಿ ನೀಡಿ. ಅಲ್ಲಿನ ಬಿಸಿನೀರಬುಗ್ಗೆಗಳಲ್ಲಿ ಮಿಂದು ಎಂಜಾಯ್ ಮಾಡಿ.