ನವದೆಹಲಿ: ದೇಶಾದ್ಯಂತ ಇಂಧನ ಬೆಲೆಯಲ್ಲಿ ಮತ್ತೆ ಏರಿಕೆಯಾಗಿದೆ. ಈ ಮೂಲಕ ಕಳೆದ ಎರಡು ತಿಂಗಳಿಂದ ಇಂಧನ ಬೆಲೆ ಒಟ್ಟು 24 ಬಾರಿ ಹೆಚ್ಚಳ ಕಂಡಂತಾಗಿದೆ. ದೇಶಾದ್ಯಂತ ಇಂದು ತೈಲದರ 37 ಪೈಸೆ ಹೆಚ್ಚಳವಾಗುವ ಮೂಲಕ ಏರಿಕೆ ಕಂಡಿದೆ. ಈ ಮೂಲಕ ಕಳೆದ 12 ದಿನಗಳಿಂದ ಪೆಟ್ರೋಲ್ ಬೆಲೆಯಲ್ಲಿ 3.64 ರೂ., ಮತ್ತು ಡೀಸೆಲ್ ಬೆಲೆಯಲ್ಲಿ 4.18 ರೂ. ಏರಿಕೆ ಕಂಡಂತಾಗಿದೆ. ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತು ರಾಜಸ್ಥಾನ ಗಳಲ್ಲಿ ಪೆಟ್ರೋಲ್- ಡೀಸೆಲ್ ದರ 100ರ ಗಡಿ ಸಮೀಪಿಸಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರತಿ ಬ್ಯಾರಲ್ ತೈಲಬೆಲೆ 60.60 ಡಾಲರ್ ಇದೆ. ಆದರೂ ದೇಶಾದ್ಯಂತ ದಿನೇ ದಿನೇ ಹೆಚ್ಚುತ್ತಿರುವ ತೈಲಬೆಲೆ ಜನಸಾಮಾನ್ಯರನ್ನು ಕಂಗಾಲಾಗುವಂತೆ ಮಾಡಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲಬೆಲೆ ಕಡಿಮೆ ಆದರೂ ದೇಶೀಯ ಮಾರುಕಟ್ಟೆಯಲ್ಲಿ ಹೆಚ್ಚಳವಾಗುತ್ತಿರುವುದು ಗ್ರಾಹಕರ ಆಕ್ರೋಶಕ್ಕೆ ಕಾರಣವಾಗಿದೆ.
ಇನ್ನು, ಈ ಬಗ್ಗೆ ಪ್ರತಿಕ್ರಿಯಿಸಿರುವ ಪ್ರಧಾನಿ ನರೇಂದ್ರ ಮೋದಿ, ನಮ್ಮ ಹಿಂದಿನ ಸರ್ಕಾರಗಳು ಇಂಧನ ಆಮದಿನ ಮೇಲೆ ಹೆಚ್ಚು ಅವಲಂಬಿತವಾಗಿದ್ದವು. ಇಂದಿನ ಈ ಪರಿಸ್ಥಿತಿಗೆ ಕಾರಣ ಇದೇ. ಕಳೆದ ಆರ್ಥಿಕ ವರ್ಷದಲ್ಲಿ ಶೇ.80ಕ್ಕಿಂತಲೂ ಅಧಿಕ ಇಂಧನವನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳಲಾಗಿದೆ. ಇಂಧನ ಬೆಲೆಯೇರಿಕೆ ನಿಜಕ್ಕೂ ಕಳವಳಕಾರಿಯಾಗಿದೆ. ಬೆಲೆಯೇರಿಕೆಯಿಂದ ಮಧ್ಯಮ ವರ್ಗದವರು ಮತ್ತು ಬಡವರಿಗೆ ತೀವ್ರ ಹೊರೆಯಾಗುತ್ತಿದೆ ಎಂದಿದ್ದಾರೆ.
ದೇಶದ ವಿವಿಧ ನಗರಗಳಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ
ಬೆಂಗಳೂರು- ಪೆಟ್ರೋಲ್ 93.61 ರೂ., ಡೀಸೆಲ್ 85.84 ರೂ.
ಮುಂಬೈ- ಪೆಟ್ರೋಲ್ 97 ರೂ., ಡೀಸೆಲ್ 88.06 ರೂ.
ಜೈಪುರ – ಪೆಟ್ರೋಲ್ 97.10 ರೂ., ಡೀಸೆಲ್ 89.44 ರೂ.
ಚೆನ್ನೈ- ಪೆಟ್ರೋಲ್ 92.59 ರೂ., ಡೀಸೆಲ್ 85.98 ರೂ.

ನವದೆಹಲಿ- ಪೆಟ್ರೋಲ್ 90.58 ರೂ., ಡೀಸೆಲ್ 80.97 ರೂ.