ನವದೆಹಲಿ: ರಾಜ್ಯಸಭೆ ಇಂದು ಅಪರೂಪದ ಕ್ಷಣಕ್ಕೆ ಸಾಕ್ಷಿಯಾಯಿತು. ಕಾಂಗ್ರೆಸ್ ನ ಹಿರಿಯ ನಾಯಕರಲ್ಲೊಬ್ಬರಾದ ಗುಲಾಂ ನಬಿ ಆಜಾದ್ ಅವರ ರಾಜ್ಯಸಭಾ ಸದಸ್ಯ ಸ್ಥಾನದ ಅವಧಿ ಇಂದು ಮುಕ್ತಾಯವಾಯಿತು. ಅವರಿಗೆ ಗೌರವಾರ್ಪಣೆ ಮಾಡುವ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾವುಕರಾಗಿ ಕಣ್ಣೀರಿಟ್ಟರು.
ಗುಲಾಂ ನಬಿ ಆಜಾದ್ ಅವರಿಗೆ ಗೌರವಾರ್ಪಣೆ ಮಾಡಿ ಮಾತನಾಡಿದ ಪ್ರಧಾನಿ ಮೋದಿ, ಅವರು ತಮ್ಮ ಪಕ್ಷದ ಕ್ಷೇಮದ ಜೊತೆಗೆ ಸದನದ ಗೌರವ ಮತ್ತು ದೇಶದ ಅಭಿವೃದ್ಧಿಯ ಬಗ್ಗೆ ಸದಾ ಚಿಂತಿಸುತ್ತಿದ್ದರು. ಹುದ್ದೆ, ಅಧಿಕಾರವನ್ನು ಹೇಗೆ ನಿರ್ವಹಿಸಬೇಕು ಎಂಬುದನ್ನು ಗುಲಾಂ ನಬಿ ಆಜಾದ್ ಅವರಿಂದ ಕಲಿಯಬೇಕು. ಅವರು ನಿವೃತ್ತರಾದರೂ ಅವರಿಂದ ಸಲಹೆಗಳನ್ನು ತೆಗೆದುಕೊಳ್ಳುವ ಕೆಸವನ್ನು ಮುಂದುವರೆಸುತ್ತೇನೆ. ಗುಲಾಂ ನಬಿ ಆಜಾದ್ ರನ್ನು ನಾನು ಹಲವು ವರ್ಷಗಳಿಂದ ನೋಡಿದ್ದೇನೆ. ನಾವಿಬ್ಬರೂ ಒಟ್ಟಿಗೆ ಮುಖ್ಯಮಂತ್ರಿ ಸ್ಥಾನಕ್ಕೇರಿದ್ದೆವು. ನಾನು ಮುಖ್ಯಮಂತ್ರಿಯಾಗುವ ಮೊದಲೇ ಅವರನ್ನು ಸಂಪರ್ಕಿಸಿದ್ದೆ. ಆ ವೇಳೆಗಾಗಲೇ ಆಜಾದ್ ಅವರು ಸಕ್ರಿಯ ರಾಜಕಾರಣದಲ್ಲಿದ್ದರು. ಅಲ್ಲದೇ, ಆಜಾದ್ ಅವರಿಗೆ ತೋಟಗಾರಿಕೆಯಲ್ಲಿಯೂ ಅಪಾರ ಅಭಿರುಚಿಯಿದೆ ಎಂದು ಗುಲಾಂ ನಬಿ ಆಜಾದ್ ಅವರ ಗುಣಗಾನ ಮಾಡಿದ್ದಾರೆ. ಅವರ ಬಗ್ಗೆ ಮಾತನಾಡುತ್ತಾ ಭಾವುಕರಾದ ಪ್ರಧಾನಿ ಮೋದಿ ಗುಲಾಂ ನಬಿ ಆಜಾದ್ ಅವರಿಗೆ ಸೆಲ್ಯೂಟ್ ಮಾಡಿ ತಮ್ಮ ಗೌರವ ತೋರಿದ್ದಾರೆ.