ಪೊಗರು ಸಿನಿಮಾಗೆ ಭರ್ಜರಿ ರೆಸ್ಪಾನ್ಸ್ : ಥಿಯೇಟರ್ ಗಳ ಮುಂದೆ ಧ್ರುವನ ಜಾತ್ರೆ

ಬೆಂಗಳೂರು. ಮೂರು ವರ್ಷಗಳ ನಿರಂತರ ಪರಿಶ್ರಮದ ಫಲವೇ ಇಂದಿನ ಪೊಗರಿನ ರಿಸಲ್ಟ್. ಖರಾಬು ಬಾಸು ಖರಾಬು ಸಾಂಗ್ ಕೇಳಿ ಕೇಳಿ ಸಿನಿಮಾ ಯಾವಾಗ ನೋಡ್ತಿವಪ್ಪ ಅಂತ ಅಭಿಮಾನಿಗಳು ಕಾಯುತ್ತಿದ್ರು. ಕನ್ನಡದ ಜೊತೆಗೆ ತೆಲುಗು ತಮಿಳಿನಲ್ಲೂ ಸಿನಿಮಾ ಇಂದು ರಿಲೀಸ್ ಆಗಿದೆ. ಧ್ರುವ ಸರ್ಜಾರ ಜಭರ್ದಸ್ತ್ ಎಂಟ್ರಿಗೇನೆ ಗಾಂಧಿನಗರ ಬೆಚ್ಚಿಬಿದ್ದಿದೆ.

ಕೊರೋನಾ ಭಯದ ನಡುವೆ ಸಿನಿಮಾಗಳು ಥಿಯೇಟರ್ ಕಡೆ ಮುಖ ಹಾಕುತ್ತಿರಲಿಲ್ಲ. ಆದ್ರೆ ಧ್ರುವನ ಬಗ್ಗೆ ಅಭಿಮಾನಿಗಳಿಗಿರುವ ಕ್ರೇಜ್ ಎಂಥದು ಅಂದ್ರೆ ಕೊರೋನಾವನ್ನು ಲೆಕ್ಕಿಸದೇ ಇಂದು ಥಿಯೇಟರ್ ಮುಂದೆ ಸಾವಿರಾರು ಅಭಿಮಾನಿಗಳು ಜಮಾಯಿಸಿದ್ದು. ನಗರದ ನರ್ತಕಿ ಥಿಯೇಟರ್‍ನಲ್ಲಿ ಅಕ್ಷರಶಃ ಜಾತ್ರೆಯ ವಾತಾವರಣ ಸೃಷ್ಟಿಯಾಗಿತ್ತು. ರಸ್ತೆಯುದ್ದಕ್ಕೂ ಪೊಗರು ಕಟೌಟ್, ಥಿಯೇಟರ್ ಅಂಗಳದಲ್ಲೆಲ್ಲಾ ಪೊಗರು ಜೊತೆಗೆ ಚಿರಂಜೀವಿ ಸರ್ಜಾರನ್ನು ನೆನಪಿಸುವ ಬ್ಯಾನರ್ ಗಳು ಎಲ್ಲರ ಗಮನ ಸೆಳೆಯುತ್ತಿದ್ದವು. ಕಾಲೇಜು ವಿದ್ಯಾರ್ಥಿಗಳ ಡಾನ್ಸ್, ಎಲ್ಲೆಲ್ಲೂ ಪೊಗರು ಹಾಡು ಹಬ್ಬದ ಫೀಲ್ ಕೊಡ್ತಾ ಇತ್ತು.

ಸಿನಿಮಾ ಆರಂಭಕ್ಕೂ ಮುನ್ನ ಥಿಯೇಟರ್‍ಗೆ ಮ್ಯೂಸಿಕ್ ಡೈರೆಕ್ಟರ್ ಚಂದನ್ ಶೆಟ್ಟಿ, ನಿರ್ದೇಶಕ ನಂದಕಿಶೋರ್, ಕಾಮಿಡಿ ಸ್ಟಾರ್ ಚಿಕ್ಕಣ್ಣ ವಿಸಿಟ್ ಮಾಡಿದ್ರು. ಇನ್ನೇನು ಸಿನಿಮಾ ಥಿಯೇಟರ್ ಒಳಗೆ ಎಂಟ್ರಿ ಕೊಡಬೇಕೆನ್ನುವಷ್ಟರಲ್ಲಿ ಧ್ರುವ ಅಭಿಮಾನಿಗಳಿಗೆ ನೇರವಾಗಿಯೇ ದರ್ಶನ್ ಕೊಟ್ರು. ಕಾರಿನ ಮೇಲೆ ಹತ್ತಿ ಡಾನ್ಸ್ ಮಾಡಿ ಅಭಿಮಾನಿಗಳನ್ನು ರಂಜಿಸಿದ್ರು. ಮಾವ ಅರ್ಜುನ್ ಸರ್ಜಾ ಕೂಡ ಜೊತೆಯಲ್ಲೇ ಸಾಥ್ ನೀಡಿದ್ರು. ಅವರ ಎಂಟ್ರಿಗೆ ಅಭಿಮಾನಿಗಳು ಹೂಮಳೆಗರೆದರು. ರೆಡ್ ಕಾರ್ಪೇಟ್ ಮೇಲೆ ಹೂಮಳೆಯೊಂದಿಗೆ ಧ್ರುವ ಹಾಗೂ ಅರ್ಜುನ್ ಸರ್ಜಾ ಥಿಯೇಟರ್ ಒಳಗೆ ಎಂಟ್ರಿ ಕೊಟ್ಟು ಅಭಿಮಾನಿಗಳ ಜೊತೆ ಕುಳಿತು ಸಿನಿಮಾ ನೋಡಿದ್ರು.

ಇನ್ನು ಸಿನಿಮಾ ನೋಡಿದ ಮಂದಿಯಲ್ಲಿ ಸಂತಸ ಕಾಣುತ್ತಿತ್ತು. ಸಿನಿಮಾ ಸೂಪರ್ ಆಗಿದೆ ಎಂಬ ಹರ್ಷ ವ್ಯಕ್ತಪಡಿಸಿದ್ರು. ಪೊಗರು ಸಿನಿಮಾ ವರ್ಲ್ಡ್ ವೈಡ್ ರಿಲೀಸ್ ಆಗಿದೆ. ಕನ್ನಡದಲ್ಲಂತು ಭರ್ಜರಿ ಓಪನಿಂಗ್ ಪಡೆದುಕೊಂಡಿದ್ದು, ಸೂಪರ್ ಸಕ್ಸಸ್ ಕಾಣೋ ಸೂಚನೆ ಕೊಟ್ಟಿದೆ.. ಈ ಮೂಲಕ ವರ್ಷಗಳ ಬಳಿಕ ಥಿಯೇಟರ್‍ನಲ್ಲಿ ಹೌಸ್‍ಫುಲ್ ಬೋರ್ಡ್ ಬಿದ್ದಿದ್ದು, ಮುಂದಿನ ಸಿನಮಾಗಳಿಗೆ ದಾರಿ ಮಾಡಿಕೊಟ್ಟಿದೆ.