ಇತ್ತೀಚೆಗಷ್ಟೇ ಮುಕ್ತಾಯಗೊಂಡ ಟೋಕಿಯೊ ಒಲಿಂಪಿಕ್ಸ್ ನಲ್ಲಿ ಗೆದ್ದಿದ್ದ ಬೆಳ್ಳಿ ಪದಕವನ್ನು ಪೋಲೆಂಡ್ ನ ಮಹಿಳಾ ಜಾವೆಲಿನ್ ಸ್ಪರ್ಧಿ ಮಾರಿಯಾ ಆಂಡ್ರೆಜೆನಿಕ್ ಹರಾಜಿಗಿಟ್ಟಿದ್ದಾರೆ.
ಹೌದು, ಒಲಿಂಪಿಕ್ಸ್ ನಲ್ಲಿ ಪದಕ ಗೆಲ್ಲುವುದು ಅಂದರೆ ಜೀವಮಾನದ ಸಾಧನೆ. ಆದರೆ ಮಾರಿಯಾ ಆಂಡ್ರೆಜೆನಿಕ್ ಜಾವೆಲಿನ್ ಸ್ಪರ್ಧೆಯಲ್ಲಿ 64.61 ಮೀ. ದೂರ ದಾಖಲಿಸಿ ಬೆಳ್ಳಿ ಪದಕ ಗೆದ್ದಿದ್ದರು. ಆದರೆ ಈ ಪದಕವನ್ನು ಜೀವನಪೂರ್ತಿ ಸಂಗ್ರಹದಲ್ಲಿಟ್ಟುಕೊಳ್ಳುವ ಬದಲು ಹರಾಜಿಗಿಟ್ಟಿದ್ದಾರೆ.
ಮಾರಿಯಾ ಆಂಡ್ರೆಜೆನಿಕ್ ಬೆಳ್ಳಿ ಪದಕ ಹರಾಜಿಗಿಟ್ಟಿರುವುದು ಒಂದು ಒಳ್ಳೆಯ ಉದ್ದೇಶಕ್ಕಾಗಿ. ಅಮೆರಿಕದಲ್ಲಿರುವ 8 ವರ್ಷದ ಬಾಲಕ ಹೃದಯ ಶಸ್ತ್ರಚಿಕಿತ್ಸೆಗಾಗಿ ನಿಧಿ ಸಂಗ್ರಹಿಸಲು ತಾನು ಜೀವನಪೂರ್ತಿ ಶ್ರಮ ವಹಿಸಿ ಗೆದ್ದಿದ್ದ ಬೆಳ್ಳಿ ಪದಕವನ್ನು ನೀಡಲು ಮುಂದಾಗಿದ್ದಾರೆ.
ಆಗಸ್ಟ್ 11ರಂದು ಫೇಸ್ ಬುಕ್ ನಲ್ಲಿ ಮಾರಿಯಾ ತನ್ನ ಪದಕವನ್ನು ಹರಾಜಿಗೆ ಇಟ್ಟಿದ್ದಳು. ಆದರೆ ಈ ಪದಕ ಮಾರಾಟವಾಗಿದ್ದೂ ಅಲ್ಲದೇ ಮರಳಿ ಅವರಿಗೆ ಬಂದಿದೆ. ಇದಕ್ಕೆ ಕಾರಣ ಮತ್ತೊಬ್ಬ ಒಲಿಂಪಿಕ್ ಕ್ರೀಡಾಪಟು ತೋರಿದ ಔದಾರ್ಯ. ಹೌದು ಮತ್ತೊಬ್ಬ ಒಲಿಂಪಿಯನ್ ಈ ಪದಕವನ್ನು 1,25,000 ಡಾಲರ್ ಗೆ ಖರೀದಿಸಿದ್ದೂ ಅಲ್ಲದೇ ಆ ಪದಕವನ್ನು ಆಕೆಗೆ ಮರಳಿಸಿ, ನಿಮ್ಮ ಮಾನವೀಯತೆ ಮುಂದೆ ಇದು ದೊಡ್ಡದಲ್ಲ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮಾರಿಯಾ 2016ರಲ್ಲಿ 0.02ಮೀ.ನಿಂದ ಹಿಂದೆ ಬಿದ್ದು ನಾಲ್ಕನೇ ಸ್ಥಾನಕ್ಕೆ ಕುಸಿಯುವ ಮೂಲಕ ಪದಕ ಗೆಲ್ಲುವ ಅವಕಾಶವನ್ನು ಕೂದಲೆಳೆ ಅಂತರದಿಂದ ಕಳೆದುಕೊಂಡಿದ್ದರು. ಆದರೆ 2019ರಲ್ಲಿ ಮೂಳೆ ಟ್ಯೂಮರ್ ಕಾಯಿಲೆಗೆ ಒಳಗಾಗಿದ್ದು, ಚಿಕಿತ್ಸೆ ಪಡೆದು ಗುಣಮುಖರಾದ ನಂತರ ಟೋಕಿಯೊ ಒಲಿಂಪಿಕ್ಸ್ ನಲ್ಲಿ ಸ್ಪರ್ಧಿಸಿದ್ದರು.