ಲಖನೌ: ಉತ್ತರ ಪ್ರದೇಶ ಪೊಲೀಸರು ಬಂಧಿಸಿದ ತಮ್ಮ ಬೆಂಬಲಿಗರನ್ನು ಬಿಡುಗಡೆ ಮಾಡುವಂತೆ ಕೋರಿ ಪ್ರಧಾನಿ ನರೇಂದ್ರ ಮೋದಿ ಅವರ ಸಹೋದರ ಪ್ರಹ್ಲಾದ್ ಮೋದಿ ಲಖನೌ ವಿಮಾನ ನಿಲ್ದಾಣದಲ್ಲಿ ಧರಣಿ ನಡೆಸಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಪ್ರಹ್ಲಾದ್ ಮೋದಿ ಇಂಡಿಗೋ ವಿಮಾನದ ಮೂಲಕ ಉತ್ತರ ಪ್ರದೇಶದ ರಾಜಧಾನಿ ಲಖನೌಗೆ ಆಗಮಿಸಿದ್ದರು. ಈ ವೇಳೆ ಅವರನ್ನು ಸ್ವಾಗತಿಸಲು ಬೆಂಬಲಿಗರು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ಆದರೆ ವಿಮಾನ ನಿಲ್ದಾಣದ ಸೆಕ್ಯೂರಿಟಿ ಶಿಷ್ಟಾಚಾರವನ್ನು ಉಲ್ಲಂಘಿಸಿದ ಆರೋಪದಲ್ಲಿ ಪೊಲೀಸರು ಬೆಂಬಲಿಗರನ್ನು ಬಂಧಿಸಿದ್ದಾರೆ.
ಇದಕ್ಕೆ ಕೋಪಗೊಂಡ ಪ್ರಹ್ಲಾದ್ ಮೋದಿ ಸಲ್ಲಿಯೇ ಏಕಾಂಗಿಯಾಗಿ ಸುಮಾರು ಒಂದೂವರೆ ಗಂಟೆ ಧರಣಿ ನಡೆಸಿದ್ದಾರೆ. ಪ್ರಧಾನಿ ಕಚೇರಿಯಿಂದ ಆದೇಶ ಬಂದ ಹಿನ್ನೆಲೆಯಲ್ಲಿ ಬೆಂಬಲಿಗರನ್ನು ಬಂಧಿಸಿದ್ದೇವೆ ಎಂದು ಪೊಲೀಸರು ಹೇಳಿದಾಗ ಆದೇಶದ ಪ್ರತಿ ತೋರಿಸಿ ಎಂದು ಕಿಡಿ ಕಾರಿದ್ದಾರೆನ್ನಲಾಗಿದೆ. ಬೆಂಬಲಿಗರನ್ನು ಬಿಡುಗಡೆ ಮಾಡಿದ ಬಳಿಕವಷ್ಟೇ ತಮ್ಮ ಧರಣಿಯನ್ನು ಪ್ರಹ್ಲಾದ್ ಮೋದಿ ವಾಪಸ್ ಪಡೆದಿದ್ದಾರೆ.