ದೇಶಾದ್ಯಂತ ಖಾಸಗಿ ಆಸ್ಪತ್ರೆಗಳಿಗೆ 1.29 ಕೋಟಿ ಡೋಜ್ ಕೊರೊನಾ ಲಸಿಕೆ ಕಳುಹಿಸಿಕೊಡಲಾಗಿದ್ದು, ಶೇ.17 ರಷ್ಟು ಅಂದರೆ ಕೇವಲ 22 ಲಕ್ಷ ಲಸಿಕೆ ಮಾತ್ರ ನೀಡಲಾಗಿದೆ.
ಕೇಂದ್ರ ಆರೋಗ್ಯ ಸಚಿವಾಲಯ ಶನಿವಾರ ಕೊರೊನಾ ಲಸಿಕೆ ಕುರಿತು ಅಂಕಿ-ಅಂಶಗಳನ್ನು ಬಿಡುಗಡೆ ಮಾಡಿದ್ದು, ಮೇ ತಿಂಗಳಲ್ಲಿ ಒಟ್ಟಾರೆ 7.4 ಕೋಟಿ ಡೋಜ್ ಲಸಿಕೆ ದೇಶಾದ್ಯಂತ ಲಭ್ಯವಿತ್ತು. ಇದರಲ್ಲಿ ಖಾಸಗಿ ಆಸ್ಪತ್ರೆಗಳಿಗೆ 1.29 ಕೋಟಿ ಡೋಜ್ ತಲುಪಿಸಲಾಗಿದ್ದು, ಒಟ್ಟಾರೆ 1.85 ಕೋಟಿ ಡೋಜ್ ಲಭ್ಯವಿತ್ತು. ಆದರೆ ಬಳಕೆಯಾಗಿದ್ದು ಕೇವಲ ಶೇ.17ರಷ್ಟು ಮಾತ್ರ ಎಂದು ತಿಳಿಸಿದೆ.
ಮೇ ತಿಂಗಳಲ್ಲಿ ದೇಶದಲ್ಲಿ ಕೊರೊನಾ ಲಸಿಕೆ ಕೊರತೆ ಉಂಟಾಗಿದ್ದು, ಜನರು ಸರಕಾರಿ ಆಸ್ಪತ್ರೆಗಳ ಮುಂದೆ ಸಾಲುಗಟ್ಟಿ ನಿಂತಿರೂ ಲಸಿಕೆ ದೊರೆತಿರಲಿಲ್ಲ. ಅದರಲ್ಲೂ ಮೊದಲ ಲಸಿಕೆ ಪಡೆದವರಿಗೆ ಸಮಯಕ್ಕೆ ಸರಿಯಾಗಿ 2ನೇ ಡೋಜ್ ದೊರೆಯದೇ ಸಮಸ್ಯೆ ಎದುರಾಗಿತ್ತು. ಇಷ್ಟಾಗಿಯೂ ಖಾಸಗಿ ಆಸ್ಪತ್ರೆಗಳಲ್ಲಿ ಬಳಕೆಯಾಗದೇ ಲಸಿಕೆಗಳು ಹಾಗೆಯೇ ಉಳಿದಿರುವುದನ್ನು ಸ್ವತಃ ಕೇಂದ್ರ ಸರಕಾರವೇ ಅಧಿಕೃತ ಹೇಳಿಕೆಯಲ್ಲಿ ಒಪ್ಪಿಕೊಂಡಿದೆ.
ಸರಕಾರಿ ಆಸ್ಪತ್ರೆಗಳಿಗೆ ಹೋಲಿಸಿದರೆ ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ದುಬಾರಿ ಆಗಿರುವ ಕಾರಣಕ್ಕೆ ಜನರು ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ ಎಂದು ಅಧಿಕಾರಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.