ಸಿನಿಮಾ ಕ್ಷೇತ್ರದಲ್ಲಿನ ಸಾಧನೆ ಹಾಗೂ ಸಾಮಾಜಿಕ ಕಾರ್ಯಗಳನ್ನು ಗುರುತಿಸಿ ನಟ ಪುನೀತ್ ರಾಜ್‌ಕುಮಾರ್ (PUNEETH RAJKUMAR ) ಅವರಿಗೆ ಮೈಸೂರು ವಿಶ್ವವಿದ್ಯಾನಿಲಯ ಮರಣೋತ್ತರ ಗೌರವ ಡಾಕ್ಟರೇಟ್ ಪ್ರದಾನ ಮಾಡಿದೆ. ಪುನೀತ್ ಪರವಾಗಿ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಗೌರವವನ್ನು ಸ್ವೀಕರಿಸಿದ್ದಾರೆ. ಪ್ರತಿ ವರ್ಷ ಮೈಸೂರು ವಿಶ್ವವಿದ್ಯಾನಿಲಯ ಘಟಿಕೋತ್ಸವದಲ್ಲಿ ಎರಡು ಬಂಗಾರದ ಪದಕ ಪ್ರದಾನ ಮಾಡುವುದಾಗಿ ಅಶ್ವಿನಿ ಘೋಷಿಸಿದ್ದಾರೆ.
ಡಾ.ರಾಜ್‌ಕುಮಾರ್ 46 ವರ್ಷಗಳ ಹಿಂದೆ ಮೈಸೂರು ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್ಗೆ ಭಾಜನರಾಗಿದ್ದರು. ಇದೀಗ ಪುನೀತ್ಗೆ ಮರಣೋತ್ತರವಾಗಿ ಅದೇ ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್ ಲಭಿಸಿದೆ. ಈ ವಿಶೇಷ ಕ್ಷಣಕ್ಕೆ ಡಾ.ರಾಜ್‌ಕುಮಾರ್ ಕುಟುಂಬದ ಸದಸ್ಯರು ಸಾಕ್ಷಿಯಾಗಿದ್ದರು. ರಾಘವೇಂದ್ರ ರಾಜ್‌ಕುಮಾರ್, ಪತ್ನಿ ಮಂಗಳಾ, ಯುವ ರಾಜ್‌ಕುಮಾರ್, ಪುನೀತ್ ರಾಜ್‌ಕುಮಾರ್ ಅವರ ಸಹೋದರಿ ಲಕ್ಷ್ಮೀ ಗೋವಿಂದರಾಜು, ವಿನಯ್ ರಾಜ್‌ಕುಮಾರ್, ಧನ್ಯಾ ರಾಮ್‌ಕುಮಾರ್ ಮೊದಲಾದವರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಗೌರವ ಡಾಕ್ಟರೇಟ್ ಪಡೆದ ಕುರಿತು ಅಶ್ವಿನಿ ಪುನೀತ್ ರಾಜ್‌ಕುಮಾರ್ ಟ್ವೀಟ್ ಮಾಡಿ, ‘‘ಕುಟುಂಬ, ಅಭಿಮಾನಿಗಳು ಹಾಗೂ ಸ್ನೇಹಿತರ ಪರವಾಗಿ ಪುನೀತ್ ರಾಜ್‌ಕುಮಾರ್ ಅವರ ಗೌರವ ಡಾಕ್ಟರೇಟ್ ಸ್ವೀಕರಿಸಲಾಯಿತು. ಮೈಸೂರು ವಿಶ್ವವಿದ್ಯಾನಿಲಯಕ್ಕೆ ಪ್ರೀತಿಪೂರ್ವಕ ವಂದನೆಗಳು’’ ಎಂದು ಬರೆದಿದ್ದಾರೆ.
ಇದನ್ನೂ ಓದಿ – ಅಪ್ಪು ಸಮಾಧಿ ದರ್ಶನ ಪಡೆದ ಅಶ್ವಿನಿ – ಕಂಠೀರವ ಸ್ಟುಡಿಯೋ ಬಳಿ ಬಿಗಿ ಪೊಲೀಸ್ ಬಂದೋಬಸ್ತ್