ಕರ್ನಾಟಕ ಸೇರಿ ದೇಶದ ವಿವಿಧೆಡೆ ಭಾರೀ ಮಳೆ ಸಾಧ್ಯತೆ: ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ

ನವದೆಹಲಿ: ದೇಶದ ವಿವಿಧ ಭಾಗಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಫೆ.16ರಿಂದ 18ರವರೆಗೆ ಕೆಲ ಪ್ರದೇಶಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಕರ್ನಾಟಕ, ಮಹಾರಾಷ್ಟ್ರ, ಛತ್ತೀಸಘಡ್, ಮಧ್ಯಪ್ರದೇಶ ಮತ್ತು ಗುಜರಾತ್ನಲ್ಲಿ ಮಳೆಯಾಗಲಿದೆ. ರೈತರು ತಮ್ಮ ಕೃಷಿಯನ್ನು ಮಳೆಯಿಂದ ರಕ್ಷಿಸಿಕೊಳ್ಳಲು ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಿ. ಇನ್ನು ಈ ರಾಜ್ಯಗಳ ತೀರ ಪ್ರದೇಶದ ಜನರು ಎಚ್ಚರದಿಂದಿರಿ. ಮೀನುಗಾರಿಕೆಗೆ ಸಮುದ್ರಕ್ಕಿಳಿಯಬೇಡಿ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.
ಮಹಾರಾಷ್ಟ್ರದ ಪುಣೆ, ನಾಸಿಕ್, ಔರಂಗಾಬಾದ್ ಮತ್ತು ಜಲಗಾಂವ್ ನಲ್ಲಿ ಫೆ.18ರಂದು ಗುಡುಗು ಸಿಡಿಲು ಸಹಿತ ಭಾರೀ ಮಳೆಯಾಗಲಿದೆ. ಹಿಮಾಲಯದಲ್ಲಿ ಚಂಡಮಾರುತ ನಿರ್ಮಾಣವಾಗುತ್ತಿದ್ದು, ಈ ಕಾರಣದಿಂದ ಕೆಲವು ರಾಜ್ಯಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ. ಇನ್ನು, ಉತ್ತರ ಮತ್ತು ವಾಯವ್ಯದಲ್ಲಿ ಬೀಸುತ್ತಿರುವ ಭಾರೀ ಗಾಳಿಯಿಂದಾಗಿ ವಾಯವ್ಯ ಭಾರತದಲ್ಲಿ ತಾಪಮಾನ ಕುಸಿದಿದೆ. ಉತ್ತರಪ್ರದೇಶ, ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಮುಂದಿನ 3 ದಿನಗಳು ಭಾರೀ ಶೀತದ ವಾತಾವರಣ ನಿರ್ಮಾಣವಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಇನ್ನು, ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಫೆ.18ರಿಂದ 20ರವರೆಗೆ ಭಾರೀ ಮಳೆಯಾಗಲಿದೆ. ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಉಡುಪಿ ಯಲ್ಲಿ ಹೆಚ್ಚಿನ ಜಾಗೃತೆ ವಹಿಸುವಂತೆ ಕೋರಲಾಗಿದೆ. ಬಾಗಲಕೋಟೆ, ಬೀದರ್, ಬೆಳಗಾವಿ, ಹಾಸನ, ಚಿಕ್ಕಮಗಳೂರು, ಹಾವೇರಿ, ಕೊಡಗು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಭಾರೀ ಮಳೆಯ ಮುನ್ಸೂಚನೆಯಿದೆ. ರಾಜಧಾನಿ ಬೆಂಗಳೂರಿನಲ್ಲಿ ಮಂಜುಕವಿದ ವಾತಾವರಣವಿರಲಿದ್ದು, ತಾಪಮಾನ ಕಡಿಮೆಯಾಗುವ ಸಾಧ್ಯತೆಯಿದೆ ಎನ್ನಲಾಗಿದೆ.