ಸುಮಾರು 8 ಮೀಟರ್ ಉದ್ದದ ಮೊಸಳೆಯೊಂದು ವಡೋದರಾ-ಮುಂಬೈ ರೈಲ್ವೆ ಟ್ರ್ಯಾಕ್ ಮೇಲೆ ಕಂಡು ಬಂದ ಹಿನ್ನೆಲೆಯಲ್ಲಿ ರಾಜಧಾನಿ ಎಕ್ಸ್ ಪ್ರೆಸ್ ಸೇರಿದಂತೆ ಹಲವಾರು ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ.
ರೈಲು ಟ್ರ್ಯಾಕ್ ಮೇಲೆ ಗಾಯಗೊಂಡಿದ್ದ ಮೊಸಳೆ ಬಿದ್ದಿದ್ದರಿಂದ ಸೂಪರ್ ಫಾಸ್ಟ್ ರಾಜಧಾನಿ ಎಕ್ಸ್ ಪ್ರೆಸ್ ರೈಲು ಸಿಬ್ಬಂದಿ 25 ನಿಮಿಷ ಕಾದು ನಿಂತು ಮೊಸಳೆಗೆ ಸಹಾಯ ಸಿಕ್ಕಿದ ನಂತರ ಸಂಚಾರ ಪುನರಾರಂಭಿಸಿದೆ.
ಕರ್ಜಾನ್ ರೈಲ್ವೆ ನಿಲ್ದಾಣದಿಂದ 5 ಕಿ.ಮೀ. ದೂರದಲ್ಲಿ ತಲೆಗೆ ಬಲವಾದ ಪೆಟ್ಟು ಬಿದ್ದಿದ್ದ ಮೊಸಳೆಯನ್ನು ರೈಲು ಸಿಬ್ಬಂದಿ ಗಮನಿಸಿದ್ದಾರೆ. ಬೆಳಿಗ್ಗೆ 3.15ರ ಸುಮಾರಿಗೆ ಕಾಡುಮೃಗಳ ಸಂರಕ್ಷಕ ಹೇಮಂತ್ ವಧಾನಾ ಅವರಿಗೆ ಕರೆ ಬಂದಿದ್ದು ಕೂಡಲೇ ರಕ್ಷಣೆಗೆ ಧಾವಿಸಿದ್ದಾರೆ. ಎಲ್ಲರ ಪ್ರಯತ್ನದ ಹೊರತಾಗಿಯೂ ಮೊಸಳೆ ಮೃತೊಪಟ್ಟಿದೆ.
ಘಟನಾ ಸ್ಥಳಕ್ಕೆ ಹೋಗುವುದು ಕಷ್ಟವಾಗಿತ್ತು. ಆದರೂ ನಾವು ಸ್ಥಳಕ್ಕೆ ಭೇಟಿ ನೀಡಿದಾಗ ಆಗಲೇ ರೈಲು ನಿಂತು 20 ನಿಮಿಷ ಕಳೆದಿತ್ತು. ಕೂಡಲೇ ಮೊಸಳೆಯನ್ನು ಟ್ರ್ಯಾಕ್ ನಿಂದ ಹೊರಗೆ ತಂದು ಚಿಕಿತ್ಸೆ ಕೊಟ್ಟೆವು. ಮೊಸಳೆ ತನ್ನ ದವಡೆ ಅಲುಗಾಡಿಸುತ್ತಿತ್ತು. ಆದರೆ ಕೆಲವೇ ಕ್ಷಣಗಳಲ್ಲಿ ಮೃತಪಟ್ಟಿತು ಎಂದು ಹೇಮಂತ್ ಘಟನೆಯನ್ನು ವಿವರಿಸಿದ್ದಾರೆ.