ರಾಮನಗರ : ಆ ಗ್ರಾಮ ರಾಜ್ಯದ ಸಚಿವರ ಹುಟ್ಟೂರಿನಲ್ಲಿ. ಅಲ್ಲಿ, ಹಾಲಿ ಸಚಿವರಿಗೆ ಸೆಡ್ಡು ಹೊಡೆದಿರುವ ತೆನೆ ಹೊತ್ತ ಮಹಿಳೆ, ಈಗ ಗ್ರಾಮ ಪಂಚಾಯತಿಯಲ್ಲಿ ಪಾರುಪತ್ಯ ಸಾಧಿಸಿದ್ದಾಳೆ. ಸಚಿವ ಸಿ.ಪಿ.ಯೋಗೇಶ್ವರ್ ಗೆ ತವರಲ್ಲೇ ಈ ಘಟನೆ ನಡೆದಿದ್ದು, ಹಾಲಿ ಸಚಿವರಿಗೆ, ಮಾಜಿ ಸಿಎಂ ಕುಮಾರಸ್ವಾಮಿ ಸರಿಯಾಗಿ ಗುನ್ನ ಕೊಟ್ಟಿದ್ದಾರೆ.
ರಾಮನಗರ ಜಿಲ್ಲೆಯ ಚನ್ನಪಟ್ಟಣದ ಚಕ್ಕೆರೆ ಗ್ರಾಮಪಂಚಾಯಿತಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಜೆಡಿಎಸ್ ಅಧಿಕಾರದ ಗದ್ದುಗೆ ಏರುವ ಮೂಲಕ ಸಚಿವರಿಗೆ ಮುಖಭಂಗವನ್ನುಂಟು ಮಾಡಿದೆ. 14 ಸದಸ್ಯರ ಪೈಕಿ 12 ಜನ ಜೆಡಿಎಸ್ ಬೆಂಬಲಿತ ಸದಸ್ಯರು, 2. ಜನ ಬಿಜೆಪಿ ಬೆಂಬಲಿತ ಸದಸ್ಯರು ಆಯ್ಕೆಯಾಗಿದ್ದರು.
ಇಷ್ಟಿದ್ದರು, ತವರಿನಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರಬೇಕು ಎನ್ನುವ ಉದ್ಧೇಶದಿಂದ ಸಚಿವರು ತೆರೆಮರೆಯಲ್ಲಿ ಕಸರತ್ತು ನಡೆಸಿದ್ದರು. ಆದರೆ, ಸಚಿವರ ಪ್ರಯತ್ನ ವ್ಯರ್ಥವಾಗಿದ್ದು, ಜೆಡಿಎಸ್ ಬೆಂಬಲಿತ ಪುಟ್ಟಮ್ಮ ಅಧ್ಯಕ್ಷೆಯಾಗಿ, ಸುಜಯ್ ಕುಮಾರ್ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಯೋಗೇಶ್ವರ್ ಹುಟ್ಟೂರಲ್ಲಿ ಜೆಡಿಎಸ್ ಪ್ರಾಬಲ್ಯ ಸಾಧಿಸಿರುವುದು ವಾಸ್ತವದಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹುಮ್ಮಸ್ಸು ತಂದಿದೆ. ಆಯ್ಕೆಯಾಗಿರುವ ಎಲ್ಲ ಸದಸ್ಯರಿಗೆ ಹಾಗೂ ಅಧ್ಯಕ್ಷ – ಉಪಾಧ್ಯಕ್ಷರಿಗೆ ಹೆಚ್.ಡಿ.ಕೆ ಭೇಟಿ ಮಾಡಿ ಶುಭಾಶಯ ಕೋರಿದ್ದಾರೆ.