ಮೂಲೆಗೆ ಸೇರಿಸಿದರೆ ಮುಗೀತು ಅಂದುಕೊಂಡಿದ್ದಾರೆ. ಇದರಿಂದ ನೊಂದಿದ್ದು, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದು ಖಚಿತ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.
ಬೆಂಗಳೂರು ಮಾರ್ಗವಾಗಿ ಮೈಸೂರಿಗೆ ಭೇಟಿ ನೀಡಿ ಬೆಳಗಾವಿಗೆ ಹಿಂತಿರುಗಿದ ನಂತರ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ರಾಜೀನಾಮೆ ನೀಡುವುದು ಖಚಿತ. ಆದರೆ ಈ ಬಗ್ಗೆ ನನಗೆ 7-8 ದಿನ ಸಮಯ ಕೊಡಿ ಎಂದರು.
ರಮೇಶ್ ಜಾರಕಿಹೊಳಿ ಮೂರು ಕಡೆ ರಾಜೀನಾಮೆ ಕುರಿತು ಮೂರು ರೀತಿಯ ಹೇಳಿಕೆ ನೀಡಿದ್ದಾರೆ. ಮೈಸೂರಿನಲ್ಲಿ ಸುತ್ತೂರು ಶ್ರೀ ಭೇಟಿಗೂ ಮುನ್ನ ರಾಜೀನಾಮೆ ನೀಡುತ್ತೇನೆ ಎಂದರು. ಸುತ್ತೂರು ಶ್ರೀ ಭೇಟಿ ನಂತರ ರಾಜೀನಾಮೆ ನೀಡಲ್ಲ ಎಂದು ಹೇಳಿದ್ದ ರಮೇಶ್ ಕುಮಾರ್, ಬೆಳಗಾವಿಗೆ ತಲುಪುತ್ತಿದ್ದಂತೆ ರಾಜೀನಾಮೆ ನೀಡುವುದು ಖಚಿತ ಎಂದು ಮತ್ತೆ ಗುಡುಗಿದ್ದಾರೆ.
ಶ್ರೀಗಳ ತಾಯಿ ತೀರಿಕೊಂಡಿದ್ದರು ಹೀಗಾಗಿ ಮೈಸೂರಿಗೆ ಹೋಗಿದ್ದೆ, ಮೈಸೂರಿಗೆ ಹೋಗಿದ್ದು ರಾಜಕೀಯ ಉದ್ದೇಶದಿಂದ ಅಲ್ಲ, ಮುಂಬೈಗೆ ಹೋಗಿದ್ದು ರಾಜಕಾರಣ ಇದೆ. ಸ್ವಾಮೀಜಿ ಎಲ್ಲ ಪಕ್ಷದ ನಾಯಕರಿಗೂ ಆಶೀರ್ವಾದ ಮಾಡ್ತಾರೆ. ಅದರಲ್ಲಿ ರಾಜಕೀಯವಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ನಾನು ರಾಜೀನಾಮೆ ಕೊಡೊದು ನಿಜ, ಅದರಲ್ಲಿ ಎರಡು ಮಾತಿಲ್. ನಾ ರಾಜೀನಾಮೆ ನೀಡೋ ವಿಚಾರ ಮೀಡಿಯಾಗಳಿಗೆ ಹೇಗೆ ಲೀಕ್ ಆಯ್ತು ಗೊತ್ತಿಲ್ಲ, ನನ್ನ ಆಪ್ತರ ಮುಂದೆ ಹೇಳಿಕೊಂಡಿದ್ದೆ. ಇವತ್ತೇ ರಾಜೀನಾಮೆ ಇಲ್ಲ, ನಮ್ಮ ಹಿತೈಷಿಗಳು ಕೆಲವರು ಏನೋ ಮಾತಾಡಿದ್ರು ಅದಕ್ಕೆ ಇನ್ನೊಂದು 8 ದಿನ ಸಮಯ ಕೊಡಿ ಎಂದು ಅವರು ಮನವಿ ಮಾಡಿದರು.
ನಮ್ಮ ಪಕ್ಷ, ಆರ್.ಎಸ್.ಎಸ್ ನಾಯಕರು, ದೆಹಲಿ ನಾಯಕರು ನನ್ನನ್ನು ಪ್ರೀತಿಯಿಂದ ನೋಡಿಕೊಂಡಿದ್ದಾರೆ. ನಮ್ಮ ಮನೆಯಲ್ಲಿ ಬ್ರದರ್ಸ್ ಇದ್ದಾರೆ, ಮಕ್ಕಳು ಇದ್ದಾರೆ. ಇನ್ನೂ ಬಹಳಷ್ಟು ಹುಲಿಗಳು ಇವೆ. ವಿರೋಧಿಗಳು ರಮೇಶ ಜಾರಕಿಹೊಳಿಯವರನ್ನ ಮೂಲೆಗುಂಪು ಮಾಡಿದ್ವಿ ಎಂದು ತಿಳಿದಿರಬೇಕು ಅದರ 10 ಪಟ್ಟು ಹುಲಿಗಳು ನಮ್ಮಲ್ಲಿದ್ದಾರೆ. ನಾವು ರೆಡಿ ಇದ್ದೇವೆ ಎಂದು ಅವರು ಹೇಳಿದರು.
ಅಸಮಾಧಾನ ಏನು ಅಂತ ಬಹಿರಂಗವಾಗಿ ಮಾತನಾಡಲು ಆಗೋದಿಲ್ಲ ಸಾಕಷ್ಟು ತಾಂತ್ರಿಕ ಸಮಸ್ಯೆಗಳಿಗೆ ನಾನು ಮುಂಬೈನ ನಮ್ಮ ಗಾಢ್ ಫಾದರ್ ಫಡ್ನವೀಸ್ ಅವರನ್ನು ಭೇಟಿಯಾಗಿ ಚರ್ಚಿಸಿದ್ದೇನೆ ನಿಜ. ಮಂತ್ರಿಗಾಗಿ ಲಾಭಿ ಮಾಡುವಷ್ಟು ಸಣ್ಣ ಮನುಷ್ಯ ನಾನಲ್ಲ. ಬೇರೆಯವರನ್ನ ಮಂತ್ರಿ ಮಾಡುವಷ್ಟು ಶಕ್ತಿ ನನಗಿದೆ. ಸೆಪ್ಟೆಂಬರ್ 7ರ ಪಿಎಲ್ ಡಿ ಬ್ಯಾಂಕ್ ಚುನಾವಣೆ ದಿನವೇ ಸಮ್ಮಿಶ್ರ ಸರ್ಕಾರ ತೆಗೆಯುವ ನಿರ್ಧಾರ ಮಾಡಿದ್ದೆ. ಆಪರೇಷನ್ ಕಮಲದ ಸಂದರ್ಭದಲ್ಲಿ ದೇವೆಂದ್ರ ಫಡ್ನವಿಸ್ ಭೇಟಿಯಾಗಿ, ಸಮ್ಮಿಶ್ರ ಸರಕಾರ ತೆಗೆಯುವ ನಿರ್ಧಾರ ಮಾಡಿದ್ದೆ. ಅಂದು ನಾನು ಅವರಿಗೆ ಹೇಳಿದ ಹಾಗೇ ಇಂದು ನಡೆಯುತ್ತಿದೆ, ಅದನ್ನು ಅವರ ಗಮನಕ್ಕೆ ತಂದಿದ್ದೇನೆ. ಫಡ್ನವಿಸ್ ನನ್ನ ಬೆನ್ನಿಗೆ ನಿಂತಿದ್ದಾರೆ ಎಂದು ಅವರು ವಿವರಿಸಿದರು.
ನಾಟಕ ಮಾಡುವ ವ್ಯಕ್ತಿ ನಾನಲ್ಲ, ಸಿಎಂ ಯಡಿಯೂರಪ್ಪ ಮುಂದಿನ ಎರಡು ವರ್ಷ ಇರಲಿದ್ದಾರೆ ಎಂದು ಹೇಳಿದ್ದೇನೆ. ಹೈಕಮಾಂಡ್ ನಿರ್ಧಾರಕ್ಕೆ ನಾನು ಬದ್ಧ. ಯಾರಿಂದ ನನಗೆ ನೋವಾಗಿದೆ, ಅವರನ್ನ ಮನೆಗೆ ಕಳಿಸದೇ ಬಿಡೋದಿಲ್ಲ ಎಂದು ಅವರು ಸವಾಲು ಹಾಕಿದರು.