ಎಐಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಜುಲೈ 22ರಿಂದ ರಾಜ್ಯ ಪ್ರವಾಸ ನಡೆಸಲಿದ್ದಾರೆ. ಈ ಮೂಲಕ ಕೆಪಿಸಿಸಿಯಲ್ಲಿ ರಾಜಕೀಯ ಗರಿಗೆದರತೊಡಗಿದೆ.
ಮಂಗಳೂರಿನಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಮಂಗಳವಾರ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ್ದು, ಜುಲೈ 23ರಂದು ಮಂಗಳೂರಿಗೆ ಭೇಟಿ ನೀಡಲಿದ್ದು, 5 ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳ ಮುಖಂಡರೊಂದಿಗೆ ಸಭೆ ನಡೆಸಲಿದ್ದಾರೆ ಎಂದರು.
ಒಂದು ವಾರಗಳ ಕಾಲ ರಾಜ್ಯ ಪ್ರವಾಸ ನಡೆಸಲಿರುವ ರಣದೀಪ್ ಸಿಂಗ್ ಸುರ್ಜೇವಾಲ ಬೆಂಗಳೂರು, ಮಂಗಳೂರು, ಹುಬ್ಬಳ್ಳಿ, ಬೆಳಗಾವಿಯಲ್ಲಿ ಸಭೆ ನಡೆಸುವ ಮೂಲಕ 25 ಜಿಲ್ಲೆಗಳ ಮುಖಂಡರೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ ಎಂದರು.
ಪ್ರಮುಖವಾಗಿ ಮುಂಬರುವ ಉಪಚುನಾವಣೆ, ವಿಧಾನಪರಿಷತ್ ಚುನಾವಣೆ, ಜಿಲ್ಲಾ ಪಂಚಾಯತು ಚುನಾವಣೆಗಳು ಅಲ್ಲದೆ ಸರಕಾರದ ವೈಫಲ್ಯ, ಜನರು ಎದುರಿಸುತ್ತಿರುವ ಸಂಕಷ್ಟ ಇತ್ಯಾದಿಗಳ ಬಗ್ಗೆ ಚರ್ಚೆ ನಡೆಯಲಿದ್ದು, ಹಾಲಿ ಮಾಜಿ ಶಾಸಕರು, ಸಂಸದರ ಸಹಿತ ಪ್ರಮುಖ ಮುಖಂಡರು ಸುರ್ಜೆವಾಲ ಜೊತೆಗಿನ ಸಭೆಯಲ್ಲಿ ಭಾಗವಹಿಸಲಿದ್ದಾರೆ ಪಕ್ಷ ಸಂಘಟನೆ ನಿಟ್ಟಿನಲ್ಲಿ ಈ ಸರಣಿ ಸಭೆಯನ್ನು ಆಯೋಜಿಸಲಾಗಿದೆ ಎಂದು ಸಲೀಂ ತಿಳಿಸಿದರು.