ನವದೆಹಲಿ: ಕೊರೋನಾ ಸೋಂಕು ಹರಡುವಿಕೆ ಭೀತಿ ಹಿನ್ನೆಲೆಯಲ್ಲಿ ರಾಷ್ಟ್ರಪತಿ ಭವನಕ್ಕೆ ಸಾರ್ವಜನಿಕರ ಪ್ರವೇಶವನ್ನು ನಿಷೇಧಿಸಲಾಗಿತ್ತು. ಈಗ 11 ತಿಂಗಳುಗಳ ಬಳಿಕ ಫೆ.6ರಿಂದ ರಾಷ್ಟ್ರಪತಿ ಭವನ ಸಾರ್ವಜನಿಕರ ಪ್ರವೇಶಕ್ಕೆ ಮುಕ್ತವಾಗಿದೆ. ಸರ್ಕಾರಿ ರಜೆಗಳನ್ನು ಹೊರತುಪಡಿಸಿ ವಾರಾಂತ್ಯಗಳಲ್ಲಿ ಸಾರ್ವಜನಿಕರು ರಾಷ್ಟ್ರಪತಿ ಭವನಕ್ಕೆ ತೆರಳಬಹುದು ಎಂದು ಮೂಲಗಳು ಮಾಹಿತಿ ನೀಡಿವೆ.

ರಾಷ್ಟ್ರಪತಿ ಭವನದ ಮ್ಯೂಸಿಯಂ ಜ.5ರಿಂದಲೇ ಸಾರ್ವಜನಿಕರ ಪ್ರವೇಶಕ್ಕೆ ಮುಕ್ತವಾಗಿತ್ತು. ಸಾಮಾನ್ಯವಾಗಿ ಉದ್ಯಾನೋತ್ಸವದಲ್ಲಿ ರಾಷ್ಟ್ರಭವನದ ಮೊಘಲ್ ಉದ್ಯಾನವನ ಸೇರಿದಂತೆ ಇನ್ನುಳಿದ ಉದ್ಯಾನವನಗಳಿಗೆ ಸಾರ್ವಜನಿಕರ ಪ್ರವೇಶವಿರುತ್ತದೆ. ರಾಷ್ಟ್ರಪತಿ ಭವನಕ್ಕೆ ಭೇಟಿ ನೀಡಬಯಸುವವರು ರಾಷ್ಟ್ರಪತಿ ಭವನದ ಅದಿಕೃತ ವೆಬ್ ಸೈಟ್ ನಲ್ಲಿ ಟಿಕೆಟ್ ಬುಕ್ ಮಾಡಿಕೊಳ್ಳಬಹುದು. ಇನ್ನು, ಭೇಟಿ ನೀಡುವ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಮತ್ತು ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಬೇಕೆಂದು ರಾಷ್ಟ್ರಪತಿ ಭವನ ಪ್ರಕಟಣೆಯಲ್ಲಿ ಹೇಳಿದೆ.