ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಕುರಿತು ಮುಂಬೈನಲ್ಲಿ ಅಂತಿಮ ತೀರ್ಮಾನ ಮಾಡಲಿದ್ದು, ಅಲ್ಲಿಂದಲೇ ಅಧಿಕೃತ ಹೇಳಿಕೆ ನೀಡಲಿದ್ದೇನೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಬಾಂಬ್ ಸಿಡಿಸಿದ್ದಾರೆ.
ಮೈಸೂರಿನಲ್ಲಿ ಸುತ್ತೂರು ಮಠದ ಸ್ವಾಮೀಜಿಯನ್ನು ಶುಕ್ರವಾರ ಭೇಟಿ ಮಾಡುವ ಮುನ್ನ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ತಂದವನು ನಾನು, ನಾನು ಮಂತ್ರಿ ಸ್ಥಾನ ಕೇಳ್ತಿನಿ ಅದರಲ್ಲಿ ತಪ್ಪೇನಿದೆ. ಸಚಿವ ಸ್ಥಾನ ನೀಡದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಬಗ್ಗೆ ಮುಂಬೈಗೆ ಹೋದ ನಂತರ ತೀರ್ಮಾನ ಮಾಡುತ್ತೇನೆ ಎಂದರು.
ಮುಖ್ಯಮಂತ್ರಿ ಸೂಚನೆ ಮೇರೆಗೆ ನಾನು ಸುತ್ತೂರು ಮಠಾಧೀಶರನ್ನು ಭೇಟಿ ಮಾಡಲು ಬಂದಿಲ್ಲ. ಬದಲಾಗಿ ಸ್ವಾಮೀಜಿ ಅವರ ತಾಯಿ ತೀರಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಭೇಟಿ ಮಾಡಲು ಬಂದಿದ್ದೇನೆ. ಸ್ವಾಮೀಜಿ ಭೇಟಿ ವೇಳೆ ರಾಜಕೀಯ ಚರ್ಚೆ ಮಾಡಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಮುಂಬೈಗೆ ಭೇಟಿ ನೀಡುವುದು ರಾಜಕೀಯ ಉದ್ದೇಶ ಇರಬಹುದು. ಮಂತ್ರಿ ಸ್ಥಾನಕ್ಕೋಸ್ಕರ ನಾನು ಸ್ವಾಮೀಜಿಯನ್ನು ಭೇಟಿ ಮಾಡಿಲ್ಲ. ಸ್ವಾಮೀಜಿಯನ್ನ ಭೇಟಿಯಾದ ಬಳಿಕ ನಾನು ಮಾತಾಡುತ್ತೇನೆ. ರಾಜೀನಾಮೆ ಈಗಲ್ಲ, ಮುಂಬೈನಲ್ಲಿ ಹೋಗಿ ಮಾತಾಡುತ್ತೇನೆ ಎಂದರು.