ಮೈಸೂರು ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿ ಆಂಧ್ರಪ್ರದೇಶದಲ್ಲಿ 500 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿದ್ದಾರೆಯೇ ಎಂಬ ಪ್ರಶ್ನೆ ಮೂಡಿದೆ. ಇದಕ್ಕೆ ಕಾರಣ ವಿಧಾನಸಭೆ ಅಧಿವೇಶನದಲ್ಲಿ ಜೆಡಿಎಸ್ ಶಾಸಕ ಸಾರಾ ಮಹೇಶ್ ಮಾಡಿದ ಗಂಭೀರ ಆರೋಪ.
ವಿಧಾನಸಭೆ ಅಧಿವೇಶನದಲ್ಲಿ ಗುರುವಾರ ಸಾರಾ ಮಹೇಶ್, ರೋಹಿಣಿ ಸಿಂಧೂರಿ ವಿರುದ್ಧ ಪರೋಕ್ಷ ವಾಗ್ಧಾಳಿ ನಡೆಸಿದರು. ಯಾರೇ ಸಿಎಂ ಆಗಲಿ ಯಾವುದೇ ಸರಕಾರ ಬರಲಿ ಇವರೇ ಅಧಿಕಾರಿ ಆಗಿರುತ್ತಾರೆ. ಯಡಿಯೂರಪ್ಪ ಇದ್ದಾಗಲೂ, ಸಿದ್ದರಾಮಯ್ಯ ಇದ್ದಾಗಲೂ ಇವರೇ ಅಧಿಕಾರಿ. ಇವರು 35 ಲಕ್ಷ ರೂ. ಖರ್ಚು ಮಾಡಿ ಈಜುಕೊಳ ನಿರ್ಮಿಸಿ ಶೋಕಿ ಮಾಡಬೇಕಿತ್ತೇ ಎಂದು ಪ್ರಶ್ನಿಸಿದರು.
ಇಂಜಿನಿಯರ್, ಸಣ್ಣಪುಟ್ಟ ಅಧಿಕಾರಿಗಳ ಮೇಲೆ ಮಾತ್ರ ರೇಡ್ ಆಗುತ್ತೆ. ಇಂತಹ ಐಎಎಸ್, ಐಪಿಎಸ್ ಅಧಿಕಾರಿಗಳ ವಿರುದ್ಧ ಐಟಿ ರೇಡ್ ಆಗುತ್ತಾ? ಇಂತಹ ಭ್ರಷ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವ ತಾಕತ್ತು ಸರಕಾರಕ್ಕೆ ಇದೆಯಾ ಎಂದು ಪ್ರಶ್ನಿಸಿದರು.
20ರಿಂದ 40 ವರ್ಷದೊಳಗಿನ ಮಹಿಳಾ ಅಧಿಕಾರಿಗಳೇ ಸಮಸ್ಯೆ ಆಗಿದ್ದಾರೆ. ಇವರ ವಿರುದ್ಧ ಯಾರು ಕ್ರಮ ತಗೋತಾರೆ? ಹಿಂದಿನ ಡಿಸಿ 6.5 ಕೋಟಿ ಅಕ್ರಮ ಮಾಡಿದ್ದಾರೆ. ಇವರು ಆಂಧ್ರಪ್ರದೇಶದಲ್ಲಿ 500 ಕೋಟಿ ಆಸ್ತಿ ಮಾಡ್ತಾರೆ. ನಿವೃತ್ತಿ ಬಳಿಕ ನಮ್ ವಿರುದ್ಧವೇ ಚುನಾವಣೆಗೆ ನಿಲ್ಲುತ್ತಾರೆ. ಇದು ರಾಜ್ಯದ ದುಡ್ಡು, ಇಂಥ ಅಧಿಕಾರಿಗಳಿಂದ ರಕ್ಷಣೆ ಕೊಡಿಸಿ ಎಂದು ಸಭಾಧ್ಯಕ್ಷರಿಗೆ ಮನವಿ ಮಾಡಿದರು.
ರೋಹಿಣಿ ಸಿಂಧೂರಿ ಅವರ ಹೆಸರನ್ನು ಎಲ್ಲಿಯೂ ಪ್ರಸ್ತಾಪಿಸದೇ ಪರೋಕ್ಷ ವಾಗ್ದಾಳಿ ನಡೆಸಿದ ಸಾರಾ ಮಹೇಶ್, ಜಿಲ್ಲಾಧಿಕಾರಿಗಳ ವಸತಿ ಗೃಹಕ್ಕೆ 5 ಎಕರೆ ಜಮೀನು ಯಾಕೆ ಬೇಕು? ಒಬ್ಬ ಸಚಿವರ ಮನೆ ದುರಸ್ತಿಗೆ 5 ಲಕ್ಷ ಕೊಡ್ತಿರ, ಅದೇ ಅಧಿಕಾರಿ ಮನೆ ನವೀಕರಣಕ್ಕೆ 50 ಲಕ್ಷನಾ? ನಾವು ಏನಾದರೂ 5-10 ರೂ. ತಗೊಂಡರೆ ದೊಡ್ಡದಾಗಿ ಸುದ್ದಿ ಭಿತ್ತರಿಸುತ್ತಾರೆ. ಆದರೆ ನಿಮ್ ಅಧಿಕಾರಿಗಳು ಕೋಟಿಗಟ್ಟೆಲೆ ನುಂಗಿದರೂ ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಅವರು ಪ್ರಶ್ನಿಸಿದರು.