ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರದಲ್ಲಿ ಫೈನಾನ್ಸಿಯರ್ ಪತ್ನಿ ರೂಪ ಕೊಲೆ ಪ್ರಕರಣಕ್ಕೆ ಟ್ವಿಸ್ಟ್ ಲಭಿಸಿದ್ದು, ಸಿನಿಮಾ ಶೈಲಿಯಲ್ಲಿ ಕೊಲೆಗೆ ಎರಡು ಬಾರಿ ಯತ್ನಿಸಿ ವಿಫಲವಾಗಿದ್ದು, ಇದರಿಂದ ರೊಚ್ಚಿಗೆದ್ದು ಇರಿದು ಕೊಂದಿರುವುದು ಪೊಲೀಸರ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.
ಆರೋಪಿ ಕಾಂತರಾಜು ಬಂಧಿಸಿದ ಎಪಿನಗರ ಪೊಲೀಸರು ವಿಚಾರಣೆ ನಡೆಸಿದಾಗ ಪತ್ನಿಯ ಶೀಲ ಶಂಕಿಸಿದ್ದ ಪತಿ ಕಾಂತರಾಜು ಕೊಲೆಗೆ ಮನೆಯಲ್ಲೇ ಸಂಚು ರೂಪಿಸಿದ್ದು, ಕರಾವಳಿ ಪ್ರವಾಸಕ್ಕೆ ಕರೆದೊಯ್ದು ಎರಡು ಬಾರಿ ಕೊಲೆ ಮಾಡಿ ಆಕಸ್ಮಿಕ ಎಂದು ಬಿಂಬಿಸಲು ಯತ್ನಿಸಿ ವಿಫಲನಾಗಿದ್ದು ತಿಳಿದು ಬಂದಿದೆ.
ಪತ್ನಿ ಅಪರಿಚಿತ ವ್ಯಕ್ತಿಯೊಬ್ಬನ ಜೊತೆಗೆ ಅನೈತಿಕ ಸಂಬಂಧದ ಶಂಕೆ ಹೊಂದಿದ್ದ ಕಾಂತರಾಜ್ ಖಿನ್ನತೆಗೆ ಒಳಗಾಗಿದ್ದು, ಕೊಲೆಗೆ ನಿರ್ಧರಿಸಿದ್ದ. ಕರಾವಳಿ ಟ್ರಿಪ್ ಹೋಗೋಣ ಅಂತ ಪತ್ನಿಯನ್ನು ಕರೆದೊಯ್ದಿದ್ದು, ಪ್ರಕೃತಿ ಸೌಂದರ್ಯ ತೋರಿಸುವ ನೆಪದಲ್ಲಿ ಪ್ರಪಾತಕ್ಕೆ ತಳ್ಳಿ ಕೊಲೆಗೆ ಪ್ರಯತ್ನಿಸಿದ್ದ. ಅಲ್ಲದೇ ಕಾರಿನಿಂದ ಡಿಕ್ಕಿ ಹೊಡೆದು ಅಪಘಾತ ಎಂದು ಬಿಂಬಿಸಲು ನೋಡಿದ್ದ. ಆದರೆ ಎರಡು ಪ್ರಯತ್ನಗಳಲ್ಲೂ ಪತ್ನಿ ಅದೃಷ್ಟವಶಾತ್ ಪಾರಾಗಿದ್ದಳು.
ಎರಡು ಬಾರಿಯ ಪ್ರಯತ್ನದಲ್ಲೂ ಪತ್ನಿ ಪಾರಾಗಿದ್ದರಿಂದ ರೊಚ್ಚಿಗೆದ್ದಿದ್ದ ಕಾಂತರಾಜ್, ಇದೇ ಕೋಪದಲ್ಲಿ ಮನೆಗೆ ಮರಳಿದ ಬೆನ್ನಲ್ಲೇ ಚಾಕುವಿನಿಂದ ಇರಿದು ಕೊಲೆ ಮಾಡಿದ್ದ. ನಂತರ ಹೊರಗಿನಿಂದ ಬಾಗಿಲು ಹಾಕಿಕೊಂಡು ಹೋಗಿದ್ದು ಕೀಯನ್ನು ಹಾಸನದಲ್ಲಿ ಬಿಸಾಡಿ ಬಂದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.