ಕೋವಿಡ್ ನಿಂದ ಅನಾಥರಾಗಿರುವ ಮಕ್ಕಳ ಬ್ಯಾಂಕ್ ಖಾತೆಗಳಿಗೆ ಮುಖ್ಯಮಂತ್ರಿ ಬಾಲ ಸೇವಾ ಯೋಜನೆಯಡಿ ಪ್ರತಿ ತಿಂಗಳು 3,500 ರೂ. ಜಮಾ ಮಾಡಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಘೋಷಿಸಿದ್ದಾರೆ.
ಚಾಮರಾಜನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕೊರೊನಾದಿಂದ ತಂದೆ, ತಾಯಿಯನ್ನು ಕಳೆದುಕೊಂಡು 48 ಮಕ್ಕಳು ಅನಾಥರಾಗಿದ್ದಾರೆ. 947 ಮಕ್ಕಳು ಒಬ್ಬ ಪೋಷಕರನ್ನು ಕಳೆದುಕೊಂಡಿದ್ದಾರೆ. ಈ ಎಲ್ಲಾ ಮಕ್ಕಳಿಗೆ ಸರಕಾರದಿಂದ ಉಚಿತ ಶಿಕ್ಷಣ ನೀಡಲಾಗುವುದು ಎಂದರು.
ಎಸ್ಸೆಸ್ಸೆಲ್ಸಿ ಪಾಸ್ ಆದ ಬಳಿಕ ಉನ್ನತ ಶಿಕ್ಷಣಕ್ಕೆ ಅನುಕೂಲ ಕಲ್ಪಿಸಲು ಲ್ಯಾಪ್ ಟ್ಯಾಪ್ ವಿತರಿಸಲಾಗುವುದು. ಹೆಣ್ಣು ಮಕ್ಕಳಿಗೆ 21 ವರ್ಷ ತುಂಬಿದ ಬಳಿಕ 1 ಲಕ್ಷ ರೂ. ನೀಡಲಾಗುವುದು. ಅನಾಥರಾದ ಮಕ್ಕಳನ್ನು ಸಲಹಲು ಶಕ್ತಿ ಇಲ್ಲದಿದ್ದರೆ ಅಂತಹ ಮಕ್ಕಳನ್ನು ಇಲಾಖೆಯು ತನ್ನ ಸುರ್ಪದಿಗೆ ತೆಗೆದುಕೊಂಡು ಶಿಕ್ಷಣ ನೀಡುತ್ತದೆ. ದತ್ತು ಕೊಡುವ ಪ್ರಕ್ರಿಯೆ ಸಹ ಮಾಡಲಾಗುವುದು ಎಂದು ಅವರು ತಿಳಿಸಿದರು.
ಕೊರೊನಾ 3ನೇ ಅಲೆ ತಡೆಯುವ ನಿಟ್ಟಿನಲ್ಲಿ ಇಲಾಖೆಯು ಕ್ರಿಯಾ ಯೋಜನೆ ಸಿದ್ಧಪಡಿಸಲಾಗಿದೆ. ಮಕ್ಕಳಿಗೆ ಪ್ರತ್ಯೇಕವಾಗಿ ತಾಲೂಕು ಕೇಂದ್ರಗಳಲ್ಲಿ ಕೋವಿಡ್ ಕೇರ್ ಕೇಂದ್ರಗಳನ್ನು ತೆರೆಯುವ ಕಾರ್ಯ ಮಾಡಲಾಗುತ್ತಿದೆ. ಹಳ್ಳಿಗಳಲ್ಲಿ ಮಕ್ಕಳಿಗೆ ಕೊರೊನಾ ಸಂದರ್ಭದಲ್ಲಿ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಗುರುತಿಸಿ ಅಗತ್ಯ ಚಿಕಿತ್ಸೆ ಕೊಡಿಸಲು ಸೂಚನೆ ನೀಡಲಾಗಿದೆ ಎಂದರು.
ಕೋವಿಡ್ ಕೇರ್ ಕೇಂದ್ರಗಳಲ್ಲಿ ಮಗುವಿನ ಜೊತೆ ತಾಯಿ ಸಹ ಉಳಿಯಲು ಅನುಕೂಲ ಕಲ್ಪಿಸಿಕೊಡಲಾಗುವುದು. 10 ರಿಂದ 18 ವರ್ಷದೊಳಗಿನ ಹುಡುಗರು ಹಾಗೂ ಹುಡುಗಿಯರು ಹಾಗೂ ಅಂಗವಿಕಲರಿಗೆ ಪ್ರತ್ಯೇಕ ಚಿಕಿತ್ಸೆ ಕೊಡಿಸಲು ಅವಕಾಶ. ಸಮುದಾಯ ಆರೋಗ್ಯ ಕೇಂದ್ರ, ತಾಲೂಕು ಆಸ್ಪತ್ರೆ ಹಾಗೂ ಜಿಲ್ಲಾಸ್ಪತ್ರೆಯಲ್ಲಿ ವಿಶೇಷ ಕೋವಿಡ್ ವಾರ್ಡ್ ಮಾಡಲು ಕ್ರಮ ಎಂದು ಅವರು ಹೇಳಿದರು.