ಬಿಜೆಪಿ ಹಿರಿಯ ನಾಯಕ ಡಿ.ವಿ. ಸದಾನಂದ ಗೌಡರು ಬೇರೆಯವರಿಗೆ ಸ್ಥಾನ ಬಿಟ್ಟುಕೊಟ್ಟಿದ್ದಾರೆ. ಆದರೆ ಅವರಿಗೆ ರಾಜ್ಯದಲ್ಲಿ ದೊಡ್ಡ ಸ್ಥಾನ ಸಿಗಬಹುದು ಎಂದು ಡಿಸಿಎಂ ಅಶ್ವಥ್ ನಾರಾಯಣ ಹೇಳಿದ್ದಾರೆ.
ರಾಮನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕೀಯದಲ್ಲಿ ಯಾವಾಗ ಏನು ಬೇಕಾದರೂ ಆಗಬಹುದು. ಆದರೆ ಮುಂದೆ ರಾಜ್ಯದ ಸಿಎಂ ಆಗುವ ವಿಚಾರ ಗೊತ್ತಿಲ್ಲ. ಅದರ ಬಗ್ಗೆ ಹೇಳುವಷ್ಟು ದೊಡ್ಡವನಲ್ಲ ನಾನು ಎಂದು ಜಾರಿಕೊಂಡರು.
ಸದಾನಂದ ಗೌಡರಿಗೆ ಪಕ್ಷದ, ರಾಜ್ಯ, ರಾಷ್ಟ್ರದಲ್ಲಿ ಯಾವುದೇ ಅಧಿಕಾರ ಕೊಡಬಹುದು. ಆದರೆ ಈಗಿನ ಸಿಎಂ ಬದಲಾವಣೆ ಚರ್ಚೆಗೂ ಸದಾನಂದ ಗೌಡರ ರಾಜಿನಾಮೆಗೂ ಸಂಬಂಧವಿಲ್ಲ ಎಂದು ಸ್ಪಷ್ಪಪಡಿಸಿದರು.
ಸಿಎಂ ಬದಲಾವಣೆ ಬಗ್ಗೆ ಯತ್ನಾಳ್ ಮತ್ತು ಯೋಗೇಶ್ವರ್ ಪದೇಪದೆ ಹೇಳಿಕೆ ನೀಡುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈಗ ರಾಜ್ಯದಲ್ಲಿ ಸಿಎಂ ಇದ್ದಾರೆ, ಹಾಗಾಗಿ ಆ ವಿಚಾರ ಬೇಕಿಲ್ಲ. ಯಾರೂ ಕೂಡ ಸಾರ್ವಜನಿಕವಾಗಿ ಹೇಳಿಕೆ ಕೊಡಬಾರದು. ನಮ್ಮ ಪಕ್ಷದ ಹೈಕಮಾಂಡ್ ವೀಕ್ ಆಗಿಲ್ಲ. ನಮ್ಮ ಪಕ್ಷದಲ್ಲಿ ಶಕ್ತಿಯಿದೆ, ಪಕ್ಷದ ವರಿಷ್ಠರು ಈ ಬಗ್ಗೆ ಗಮನಹರಿಸುತ್ತಾರೆ ಎಂದು ಸ್ಪಷ್ಟಪಡಿಸಿದರು.