ಬೆಂಗಳೂರು : ಜೂಜು ಅಡ್ಡೆ ನಿರ್ಮಿಸಿ ಅಕ್ರಮ ಚಟುವಟಿಕೆ ನಡೆಸುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಗೂಂಡಾ ಕಾಯ್ದೆಯಡಿ ಮುಂಗಾರು ಮಳೆ- 2 ಚಿತ್ರದ ನಾಯಕಿ ನೇಹಾ ಶೆಟ್ಟಿ ತಂದೆ ಹರಿರಾಜ್ ಶೆಟ್ಟಿ ಅವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ರಿಕ್ರಿಯೇಶನ್ ಕ್ಲಬ್ ಹೆಸರಲ್ಲಿ ಹಲವೆಡೆಗಳಲ್ಲಿ ಸ್ಕಿಲ್ ಗೇಮ್, ವಿಡಿಯೋ ಗೇಮ್ ಪಾರ್ಲರ್ ಹೆಸರಲ್ಲಿ ಜೂಜು ಅಡ್ಡೆಗಳನ್ನು ನಡೆಸುತ್ತಿದ್ದು, ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿದ್ದರು ಎನ್ನಲಾಗಿದೆ.
ಹರಿರಾಜ್ ಶೆಟ್ಟಿ ವಿರುದ್ಧ ಕಬ್ಬನ್ ಪಾರ್ಕ್, ಹೈಗ್ರೌಂಡ್ಸ್, ಅಶೋಕನಗರ, ಕೋರಮಂಗಲ, ಇಂದಿರಾ ನಗರ ಸೇರಿದಂತೆ ಹಲವು ಪೊಲೀಸ್ ಠಾಣೆಗಳಲ್ಲಿ 19 ಪ್ರಕರಣ ದಾಖಲಾಗಿದೆ. 2014ರಿಂದಲೂ ಅಕ್ರಮ ದಂಧೆ ನಡೆಸುತ್ತಿರುವ ಆರೋಪ ಕೇಳಿಬಂದಿದ್ದು, ಎಚ್ಚರಿಕೆ ನೀಡಿದ್ದರೂ ಕೃತ್ಯ ಮುಂದುವರೆಸಿದ್ದರು ಎನ್ನಲಾಗಿದೆ. ಇದೀಗ ಗೂಂಡಾ ಕಾಯ್ದೆಯಡಿ ಸಿಸಿಬಿ ಪೊಲೀಸರು ಹರಿರಾಜ್ ಶೆಟ್ಟಿಯನ್ನು ಬಂಧಿಸಿದ್ದಾರೆ.
ಈ ಹಿಂದೆಯೇ ಅವರನ್ನು ಬಂಧಿಸಲಾಗಿತ್ತು. ಆದರೆ ಅವರು ನ್ಯಾಯಾಲಯದಿಂದ ತಡೆಯಾಜ್ಞೆ ತಂದು ಬಿಡುಗಡೆಯಾಗಿದ್ದರು. ಇದೀಗ ನ್ಯಾಯಾಲಯ ತಡೆಯಾಜ್ಞೆ ತೆರವುಗೊಳಿಸಿದೆ. ಹಾಗಾಗಿ ಪುನಃ ಪೊಲೀಸರು ಅವರನ್ನು ಕರೆದೊಯ್ದಿದ್ದಾರೆ.