ಬೆಂಗಳೂರು: ಚಂದನವನದ ಚೆಂದದ ನಟಿ ಪ್ರಣೀತಾ ಸುಭಾಷ್. ಇವರು ಕನ್ನಡ ಚಿತ್ರಗಳಲ್ಲದೇ ತೆಲುಗು, ತಮಿಳು ಇದೀಗ ಬಾಲಿವುಡ್‍ನಲ್ಲಿಯೂ `ಹಂಗಾಮ 2′ ಚಿತ್ರದ ಮೂಲಕ ಸಾಕಷ್ಟು ಸುದ್ದಿ ಮಾಡಿದ್ದಾರೆ. ಸಿನಿಮಾ ಜಗತ್ತು, ನಟನೆ ಎಂದು ಮಾತ್ರ ಸುಮ್ಮನೆ ಕೂರದೇ, ಸಮಾಜಮುಖಿ ಕಾರ್ಯಗಳಲ್ಲಿ ತಮ್ಮನ್ನ ತೊಡಗಿಸಿಕೊಂಡು ಮಾದರಿಯಾಗಿದ್ದಾರೆ.
`ಪ್ರಣೀತಾ ಫೌಂಡೇಶನ್’ ಮೂಲಕ ಲಾಕ್‍ಡೌನ್ ವೇಳೆ ಸಾವಿರಾರು ಜನರ ಹಸಿವನ್ನು ನೀಗಿಸಿದ್ದಾರೆ ಈ ನಟಿಯ ನಡೆಗೆ ಕರ್ನಾಟಕ ಜನತೆ ತಲೆಬಾಗಿದೆ. ಇದೀಗ ಪ್ರಣೀತಾ ಮತ್ತೊಂದು ಸಮಾಜಮುಖಿ ಕೆಲಸಕ್ಕೆ ಮುಂದಾಗಿದ್ದಾರೆ. ಬೆಂಗಳೂರಿನ ಮೊದಲ ಕನ್ನಡ ಮಾಧ್ಯಮ ಶಾಲೆ ಮತ್ತು ಅತ್ಯಂತ ಪುರಾತನ ಶಾಲೆ ಎಂದು ಹೆಗ್ಗಳಿಕೆ ಪಾತ್ರವಾಗಿರೋ ಶಾಲೆಯನ್ನ ಮುಚ್ಚಲು ಆಡಳಿತ ಮಂಡಳಿ ನಿರ್ಧರಿಸಿದೆ ಅದಕ್ಕೆ ನಟಿ ಪ್ರಣೀತಾ ಈ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ..
ನಟಿ ಪ್ರಣೀತಾ ಟ್ವೀಟ್ ಮುಖಾಂತರ `ಬೆಂಗಳೂರಿನ ಮೊದಲ ಕನ್ನಡ ಮಾಧ್ಯಮ ಶಾಲೆ, ಹಾಗೆಯೇ ಡಾ ವಿಷ್ಣುವರ್ಧನ್ ಓದಿರುವ ಸಂಸ್ಥೆಯು ಮುಚ್ಚಿರುವುದು ನನಗೆ ಬೇಸರ ತಂದಿದೆ. ಈ ವಿಷಯದ ಬಗ್ಗೆ ರಾಜ್ಯ ಸರ್ಕಾರವು ಗಮನಹರಿಸಬೇಕೆಂದು ದಯಮಾಡಿ ಕೇಳಿಕೊಳ್ಳುತ್ತೇನೆ. ಪ್ರಣೀತಾ ಫೌಂಡೇಶನ್ ವತಿಯಿಂದ ಸಾಧ್ಯವಾದಷ್ಟು ಸಹಾಯ ಸಿದ್ಧರಿದ್ದೇವೆ’ ಎಂದು ಟ್ವೀಟ್ ಮೂಲಕ ತಿಳಿಸಿದ್ದಾರೆ.. ನಟಿ ಪ್ರಣೀತಾ ಅವರ ಈ ನಡೆಗೆ ಶ್ಲಾಘನೆ ವ್ಯಕ್ತವಾಗಿದೆ..
ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಮಾಡೆಲ್ ಹೈಸ್ಕೂಲ್ ವಿದ್ಯಾರ್ಥಿಗಳಿಲ್ಲದೇ ಖಾಲಿ ಮನೆಯಂತಾಗಿದೆ. ಸುಮಾರು 150 ವರ್ಷ ಇತಿಹಾಸ ಹೊಂದಿರುವ ಈ ಶಾಲೆಯಲ್ಲಿ ಕಳೆದ ಮೂರು ವರ್ಷದಿಂದ ವಿದ್ಯಾರ್ಥಿಗಳ ದಾಖಲಾತಿ ಆಗಿಲ್ಲ. ಇದರಿಂದ ನಿರಾಸೆಗೊಂಡ ಆಡಳಿತ ಮಂಡಳಿ ಶಾಲೆ ಮುಚ್ಚಲು ಮುಂದಾಗಿದೆ. ಆಡಳಿತ ಮಂಡಳಿಗೆ ನಟಿ ಪ್ರಣೀತಾ ಶಾಲೆ ಮುಚ್ಚದಿರಿ ಎಂದು ಮನವಿ ಮಾಡಿದ್ದಾರೆ.