ಮೈಸೂರು ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿ ವಿರುದ್ಧ ಜೆಡಿಎಸ್ ಶಾಸಕ ಸಾರಾ ಮಹೇಶ್ ವಿಧಾನಸಭೆ ಅಧಿವೇಶನದಲ್ಲಿ ಹಕ್ಕುಚ್ಯುತಿ ಮಂಡಿಸುವ ಮೂಲಕ ಮತ್ತೊಮ್ಮೆ ಸಮರ ಸಾರಿದ್ದಾರೆ.
ಮಂಗಳವಾರ ನಡೆದ ಕಲಾಪದಲ್ಲಿ ರೋಹಿಣಿ ಸಿಂಧೂರಿ ವಿರುದ್ಧ ಹಕ್ಕುಚ್ಯುತಿ ಮಂಡಿಸಿದ ಸಾರಾ ಮಹೇಶ್, ನನಗೆ ಬಂದ ಪರಿಸ್ಥಿತಿ ರಾಜ್ಯದ ಯಾವ ಶಾಸಕರಿಗೂ ಬರಬಾರದು. ಯಾರದೋ ಕೈ ಕಾಲು ಹಿಡಿದ ಮೈಸೂರಿಗೆ ಜಿಲ್ಲಾಧಿಕಾರಿಯಾಗಿ ಬಂದಿದ್ದ ರೋಹಿಣಿ ಸಿಂಧೂರಿ, ಸಾಮಾನ್ಯ ಸಭೆಯಲ್ಲಿ ಆದ ತೀರ್ಮಾನಕ್ಕೆ ಅನುಮೋದನೆ ಕೊಡದೇ ಹಕ್ಕುಚ್ಯುತಿ ಮಾಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ಶಾಸಕರ ಕಚೇರಿ ದುರಸ್ತಿಗೆ 4-5 ಲಕ್ಷ ಸರಕಾರ ಕೊಡುತ್ತೆ. ಆದರೆ ಜಿಲ್ಲಾಧಿಕಾರಿ ಕಚೇರಿ ದುರಸ್ತಿಗೆ 15 ಲಕ್ಷ ಖರ್ಚು ಮಾಡಲಾಗಿದೆ. ಕ್ರಿಯಾ ಯೋಜನೆಯಲ್ಲಿ ಜಿಲ್ಲಾಧಿಕಾರಿ ನೇರವಾಗಿ ಬ್ಯಾಗ್ ಖರೀದಿ ಮಾಡಿದ್ದಾರೆ. ಮೈಸೂರು ಪುರಸಭೆ, ತಾಲೂಕು ಪಂಚಾಯಿತಿ ಜಿಲ್ಲಾ ಪಂಚಾಯಿತಿ, ಹಕ್ಕು ಮೊಟಕುಗೊಳಿಸಿದ್ದಾರೆ ಎಂದು ಅವರು ಗಂಭೀರ ಆರೋಪ ಮಾಡಿದರು.
ಸಾರಾ ಮಹೇಶ್ ಒತ್ತಡ ತಂದು ವರ್ಗಾವಣೆ ಮಾಡಿದ್ದಾರೆ ಅಂತ ನಿರ್ಗಮಿತ ಜಿಲ್ಲಾಧಿಕಾರಿ ನನ್ನ ಮೇಲೆ ಆರೋಪ ಮಾಡಿದ್ದಾರೆ. ಆದರೆ ಯಾರದೋ ಕಾಲು ಹಿಡಿದು ಮೈಸೂರಿಗೆ ಜಿಲ್ಲಾಧಿಕಾರಿಯಾಗಿ ಬಂದು ಮಾಡಿದ್ದೇಲ್ಲಾ ಅನಾಚಾರದ ಕೆಲಸ. 30 ಲಕ್ಷ ಖರ್ಚು ಮಾಡಿ ಸ್ವಿಮ್ಮಿಂಗ್ ಪೂಲ್ ಕಟ್ಟಿಸಿದ್ದಾರೆ. 15 ಲಕ್ಷ ವೆಚ್ಚದಲ್ಲಿ ಕಚೇರಿ ನವೀಕರಣ ಮಾಡಿಸಿಕೊಂಡರು ಎಂದು ಆರೋಪಿಸಿದರು.