ವಿವಾದಾತ್ಮಕ ಮೈಸೂರು ನಿರ್ಗಮಿತ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಜೆಡಿಎಸ್ ಶಾಸಕ ಸಾರಾ ಮಹೇಶ್ 100ರೂ.ಗೆ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ. ಈ ಮೂಲಕ ಅಧಿಕಾರಿ ಮತ್ತು ಜನಪ್ರತಿನಿಧಿ ನಡುವಿನ ಕಲಹ ಕಾನೂನು ಮೆಟ್ಟಿಲೇರಿದೆ.
ಸಾರ್ವಜನಿಕವಾಗಿ ಮಾನಹಾನಿ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಮಾನಹಾನಿ ಮೊಕದ್ದಮೆ ಹೂಡಿರುವ ಸಾರಾ ಮಹೇಶ್, ಜೊತೆಗೆ ವಿಧಾನಸಭೆಯಲ್ಲಿ ಹಕ್ಕುಚ್ಯುತಿ ಮಂಡನೆಗೂ ನಿರ್ಧರಿಸಿದ್ದಾರೆ.
ಚಾಮರಾಜನಗರ ಅಕ್ಸಿಜನ್ ದುರಂತದ ಹಿನ್ನೆಲೆಯಲ್ಲಿ ಶಾಸಕರು ಕ್ಷಮೆ ಕೋರುವಂತೆ ರೋಹಿಣಿ ಸಿಂಧೂರಿ ಹೇಳಿಕೆ ನೀಡಿದ್ದರು. ಅಲ್ಲದೇ ಭೂಕಬಳಿಕೆ ಮಾಡಿ ಕಲ್ಯಾಣ ಮಂಟಪ ನಿರ್ಮಿಸಿದ್ದಾರೆ ಎಂಬ ಗಂಭೀರ ಆರೋಪ ಮಾಡಿದ್ದರು.
ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ಬಿಡುಗಡೆ ಮಾಡಿದ್ದ ರೋಹಿಣಿ ಸಿಂಧೂರಿ 10 ವರ್ಷಗಳ ಹಿಂದೆ ಸಾರಾ ಮಹೇಶ್ ಆಸ್ತಿಗಳ ಬಗ್ಗೆಯೂ ತನಿಖೆ ನಡೆಸುವಂತೆ ಆಗ್ರಹಿಸಿದ್ದರು. ಪತ್ನಿ ಹೆಸರಲ್ಲಿರುವ ಆಸ್ತಿಯ ಬಗ್ಗೆಯೂ ಮೂಡಾಗೆ ಪತ್ರ ಬರೆಯಲಾಗಿತ್ತು. ಈ ಎಲ್ಲಾ ವಿಚಾರಗಳಲ್ಲಿ ಸಾರಾ ಮಹೇಶ್ ಮಾನಹಾನಿಗೆ ಅರ್ಜಿ ಸಲ್ಲಿಸಿದ್ದಾರೆ.
ಬೆಂಗಳೂರು ಹಾಗೂ ಮೈಸೂರಿನ ನ್ಯಾಯಾಲಯಗಳಲ್ಲಿ ಸಿವಿಲ್ ಮತ್ತು ಕ್ರಿಮಿನಲ್ ಮಾನಹಾನಿ ಪ್ರಕರಣವನ್ನು ಸಾರಾ ಮಹೇಶ್ ದಾಖಲಿಸಿದ್ದಾರೆ.