ಖಾಸಗಿ ಶಾಲೆಗಳ ಆಡಳಿತ ಮಂಡಳಿ ಒತ್ತಡಕ್ಕೆ ಮಣಿದ ರಾಜ್ಯ ಸರಕಾರ ಕೊರೊನಾ ಸೋಂಕಿನ ಭೀತಿ ಮತ್ತು ಲಾಕ್ ಡೌನ್ ನಡುವೆಯೇ ಜುಲೈ 1ರಿಂದ ಸರಕಾರಿ ಹಾಗೂ ಖಾಸಗಿ ಶಾಲೆಗಳ ಆರಂಭಕ್ಕೆ ಆದೇಶ ಹೊರಡಿಸಿದೆ.
ಶೈಕ್ಷಣಿಕ ಚಟುವಟಿಕೆ ನಿರ್ವಹಣೆ ಕುರಿತು ಸಾರ್ವಜನಿಕ ಶಿಕ್ಷಣ ಇಲಾಖೆ ಸೋಮವಾರ ಮಾರ್ಗಸೂಚಿ ಹೊರಡಿಸಿದ್ದು, ಜೂಲೈ ಒಂದರಿಂದ ಸರ್ಕಾರಿ ಹಾಗೂ ಖಾಸಗಿ ಶಾಲೆಗಳ ಆರಂಭವಾಗಲಿದ್ದು, ಮಕ್ಕಳ ಕಲಿಕೆಗೆ ಶಿಕ್ಷಕರು ಪೂರ್ವ ತಯಾರಿ ನಾಳೆಯಿಂದ ಪ್ರಾರಂಭಿಸಬೇಕು ಎಂದು ಸೂಚಿಸಿದೆ.
ನಾಳೆಯಿಂದ ಪ್ರಸಕ್ತ ಸಾಲಿನ ಶೈಕ್ಷಣಿಕ ಚಟುವಟಿಕೆಗಳನ್ನು ಆರಂಭಿಸುವಂತೆ ಶಿಕ್ಷಣ ಇಲಾಖೆ ಸೂಚನೆ ಹೊರಡಿಸಿದ್ದು, ಲಾಕ್ ಡೌನ್ ಮುಂದುವರಿದಿರುವ ಜಿಲ್ಲೆಗಳಿಗೆ ವಿನಾಯಿತಿ ನೀಡಿದೆ. ಲಾಕ್ ಡೌನ್ ನಿರ್ಬಂಧವಿರುವ ಜಿಲ್ಲೆಗಳಲ್ಲಿನ ಶಿಕ್ಷಕರು ಮನೆಯಿಂದಲೇ ಕೆಲಸ ನಿರ್ವಹಿಸಬೇಕು. ಮಕ್ಕಳ ದಾಖಲಾತಿ ಕಲಿಕಾ ಪೂರ್ವ ಸಿದ್ದತೆ ಆರಂಭಿಸಬೇಕು ಎಂದು ತಿಳಿಸಿದೆ.
ನಿರ್ಬಂಧ ಸಡಿಲಿಕೆಯಾದ ಕೂಡಲೇ ಶಾಲೆಗೆ ತೆರಳಿ ಶಿಕ್ಷಕರು ಕಾರ್ಯ ನಿರ್ವಹಿಸಬೇಕು. ಅನ್ ಲಾಕ್ ಆಗಿರುವ ಜಿಲ್ಲೆಗಳ ಶಿಕ್ಷಕರು ನಾಳೆಯಿಂದ ದಾಖಲಾತಿ ಆರಂಭಿಸಬೇಕು ಅಂತ ಶಿಕ್ಷಣ ಇಲಾಖೆ ಆಯಕ್ತ ಅನ್ಬಕುಮಾರ್ ಆದೇಶದಲ್ಲಿ ವಿವರಿಸಿದ್ದಾರೆ.