ಅಂಟಾರ್ಟಿಕಾದ ಬೃಹತ್ ಹಿಮಗಡ್ಡೆಯ ಕೆಳಗೆ ಜೀವಿಗಳು ಪತ್ತೆ: ಸಂಶೋಧನೆಗೆ ಮುಂದಾದ ತಜ್ಞರು
ಅಂಟಾರ್ಟಿಕಾ: ಅಂಟಾರ್ಟಿಕಾ ಭೂಮಿಯ ಮೇಲಿರುವ ಅತಿ ಎತ್ತರದ ಖಂಡ. ಇದು ಸಮುದ್ರಮಟ್ಟದಿಂದ 2300ಮೀ. ಎತ್ತರದಲ್ಲಿದೆ. ಈ ಖಂಡದ ಶೇ. 95 ಭಾಗ ಹಿಮಾವೃತ, ಶೀತಲ ಖಂಡ, ಹಿಮದ ಮರುಭೂಮಿ, ಶ್ವೇತಖಂಡ, ರೆಫ್ರಿಜಿರೇಟರ್ ಖಂಡ ಎಂದು ಈ ಖಂಡಕ್ಕೆ ಕರೆಯುತ್ತಾರೆ. ಅಂಟಾರ್ಟಿಕಾದಲ್ಲಿ ಮನುಷ್ಯರಷ್ಟೇ ಅಲ್ಲ ಪ್ರಾಣಿಗಳೂ ವಾಸ ಮಾಡಲು ಬಹಳ ಕ್ಲಿಷ್ಟಕರ ವಾತಾವರಣ ಇದೆ. ಸಂಪೂರ್ಣ ಮಂಜುಗಡ್ಡೆಗಳಿಂದ ಆವೃತವಾಗಿರುವ ಇಲ್ಲಿ ಮೈಮರಗಟ್ಟಿಸುವ ಚಳಿ, ಬೆಳಕು ಮತ್ತು ಆಹಾರದ ಕೊರತೆಯಿಂದ ಜೀವಿಗಳು ಬದುಕಲು ಆಗುವುದೇ ಇಲ್ಲ ಎಂದು ಹೇಳಲಾಗುತ್ತದೆ. ಇಂಥ ಪರಿಸ್ಥಿತಿಯಲ್ಲಿ ಇಲ್ಲಿ ಜೀವಿಗಳು ವಾಸವಿವೆ ಎಂಬ ಸುದ್ದಿ ಸಂಶೋಧಕರ ತಲೆಕೆಡಿಸಿದೆ.
ಹೌದು, ಅಚಾನಕ್ಕಾಗಿ ಅಂಟಾರ್ಟಿಕಾದಲ್ಲಿ ಜೀವಿಗಳಿವೆ ಎಂದು ವಿಜ್ಞಾನಿಗಳು ಅಚಾನಕ್ಕಾಗಿ ಪತ್ತೆ ಮಾಡಿದ್ದಾರೆ. ಭಾರತದ ಅರ್ಧಭಾಗದಷ್ಟು ವಿಸ್ತೀರ್ಣ ಹೊಂದಿರುವ ಫಿಲ್ಶ್ನರ್ ರೋನ್ನೆ ಎಂಬ ಹಿಮಗಡ್ಡೆಯ ಕೆಳಗೆ ಜೀವಿಗಳು ಪತ್ತೆಯಾಗಿವೆ. ಸರ್ವೇ ಸಂಸ್ಥೆಯೊಂದರ ಸಂಶೋಧಕರು ಅಧ್ಯಯನದ ಉದ್ದೇಶದಿಂದ ಈ ಹಿಮಗಡ್ಡೆಯ ಕೆಳಗೆ ಸ್ಯಾಂಪಲ್ ಕಲೆಹಾಕಲು ಡ್ರಿಲ್ ಮಾಡಿ ಶೋಧಿಸಿದ್ದಾರೆ. ಹೀಗೆ ಡ್ರಿಲ್ ಮಾಡುವಾಗ ಸಿಕ್ಕ ಚಿಕ್ಕ ಬಂಡೆಯನ್ನು ಪರಿಶೀಲನೆ ಮಾಡಿದಾಗ ಆ ಬಂಡೆಗೆ ಜೀವಿಗಳು ಅಂಟಿಕೊಂಡಿರುವುದು ಪತ್ತೆಯಾಗಿದೆ. ಈ ಜೀವಿಗಳು ನೋಡಲು ಸ್ಪಾಂಜ್ ನಂತಿದ್ದು, ಒಂದು ವಿಧದ ಜೀವಿ ಕಡ್ಡಿಯಂತೆ ಚಾಚಿದೆ. ಮತ್ತೊಂದು ವಿಧದ ಜೀವಿ ದುಂಡಗಿದೆ. ಈ ಜೀವಿಗಳು ಇಲ್ಲಿ ಹೇಗೆ ಬಂದವು? ಆಹಾರಕ್ಕಾಗಿ ಏನನ್ನು ಅವಲಂಬಿಸಿವೆ? ಎಷ್ಟು ಸಮಯದಿಂದ ಇಲ್ಲಿ ವಾಸಿಸುತ್ತಿವೆ? ಎಂಬ ಪ್ರಶ್ನೆಗಳು ವಿಜ್ಞಾನಿಗಳನ್ನ ಕಾಡುತ್ತಿದೆ. ಈ ನಿಟ್ಟಿನಲ್ಲಿ ಸಂಶೋಧನೆಗಳು ಪ್ರಾರಂಭವಾಗಿದ್ದು ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.
ಅಂಟಾರ್ಟಿಕಾಗೆ ಅತ್ಯಂತ ಸಮೀಪದ ನೆಲ ಭಾಗವೆಂದರೆ ಲ್ಯಾಟಿನ್ ಅಮೆರಿಕದ ಕೊನೆಯ ತುದಿ ಕೇಪ್ಹಾರನ್. ಈ ಖಂಡದಲ್ಲಿ ಸಂಪೂರ್ಣವಾಗಿ ಪ್ರತಿಕೂಲ ಹವಾಮಾನವಿದೆ. ವರ್ಷದಲ್ಲಿ ಆರು ತಿಂಗಳು ಕತ್ತಲು, ಆರು ತಿಂಗಳು ಬೆಳಕು ಇರುವುದರಿಂದ ಇಲ್ಲಿರುವ ಸೀಮಿತ ಜೀವಿಗಳೂ ಈ ಪ್ರತಿಕೂಲ ವಾತಾವರಣಕ್ಕೆ ಹೊಂದಿಕೊಂಡು ಬದುಕುತ್ತವೆ. ಇಲ್ಲಿಯ ಪ್ರಧಾನ ಜೀವಿಗಳೆಂದರೆ ಪೆಂಗ್ವಿನ್.