ಬಜಾರಿ, ಗ್ಲಾಮರ್..ಮುಗ್ದೆ.. ಹೀಗೆ ಎಲ್ಲಾ ರೀತಿಯ ಪಾತ್ರಗಳಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದ ಕನ್ನಡ ಚಿತ್ರರಂಗದ ಹಿರಿಯ ನಟಿ ಅಭಿನಯ ಶಾರದೆ ಜಯಂತಿ ನಿಧನರಾಗಿದ್ದಾರೆ. ಅವರಿಗೆ 76 ವರ್ಷ ವಯಸ್ಸಾಗಿತ್ತು.
ಅಸ್ತಮಾ, ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಜಯಂತಿ ಸೋಮವಾರ ನಸುಕಿನ ಜಾವ ಬೆಂಗಳೂರಿನ ತಮ್ಮ ನಿವಾಸದಲ್ಲಿ ನಿಧನರಾಗಿದ್ದು, ಕನ್ನಡ ಚಿತ್ರರಂಗದ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ. ಕಳೆದ ವರ್ಷ ಕೋವಿಡ್-19 ಸಮಯದಲ್ಲಿ ಅನಾರೋಗ್ಯಕ್ಕೆ ತುತ್ತಾಗಿ ಆಸ್ಪತ್ರೆಯಲ್ಲಿ 40 ದಿನಗಳ ಕಾಲ ಇದ್ದು ಚೇತರಿಸಿಕೊಂಡು ಮನೆಗೆ ಹಿಂತಿರುಗಿದ್ದರು.
ಕನ್ನಡದಲ್ಲಿಯೇ ಸುಮಾರು 190 ಚಿತ್ರಗಳಲ್ಲಿ ನಟಿಸಿದ್ದ ಜಯಂತಿ, ತೆಲುಗು, ತಮಿಳು, ಮಲಯಾಳಂ, ಹಿಂದಿ ಮತ್ತು ಮರಾಠಿ ಸೇರಿದಂತೆ 500ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಕನ್ನಡದ ನಟ ಸಾರ್ವಭೌಮ ಡಾ.ರಾಜ್ ಕುಮಾರ್ ಅವರ ಜೊತೆ ಅತೀ ಹೆಚ್ಚು 45 ಚಿತ್ರಗಳಲ್ಲಿ ನಟಿಸಿದ ಹೆಗ್ಗಳಿಕೆ ಜಯಂತಿಯ ಹೊಂದಿದ್ದರು.
1950ರಲ್ಲಿ ಬಳ್ಳಾರಿಯಲ್ಲಿ ಜನಿಸಿದ್ದ ಜಯಂತಿಯವರ ಮೂಲ ಹೆಸರು ಕಮಲಾ ಕುಮಾರಿ. ತಂದೆ ಬಾಲಸುಬ್ರಹ್ಮಣ್ಯಂ ಬೆಂಗಳೂರಿನ ಸೇಂಟ್ ಜೋಸೆಫ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದರೆ, ತಾಯಿ ಸಂತಾನಲಕ್ಷ್ಮಿ ಗೃಹಿಣಿ. ಚಿತ್ರರಂಗಕ್ಕೆ ಬಂದ ನಂತರ ಜಯಂತಿ ಎಂದು ಹೆಸರು ಬದಲಿಸಿಕೊಂಡಿದ್ದರು. ವೈ.ಆರ್. ಪುಟ್ಟಸ್ವಾಮಿಯವರ ‘ಜೇನುಗೂಡು’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಜಯಂತಿ ಪಾದಾರ್ಪಣೆ ಮಾಡಿದ್ದರುಇ.
ಕನ್ನಡ ಚಿತ್ರರಂಗದಲ್ಲೆ ಮೊದಲ ಬಾರಿಗೆ ಬಿಕಿನಿ ತೊಟ್ಟು ಸುದ್ದಿಯಾಗಿದ್ದ ನಟಿ ಜಯಂತಿ, ಬಹುಬೇಡಿಕೆಯಲ್ಲಿದ್ದಾಗಲೇ ಪುಟ್ಟಣ್ಣ ಕಣಗಾಲ್ ಅವರ ನಾಗರಹಾವು ಚಿತ್ರದ ಒಂದೇ ಒಂದು ಹಾಡಿನಲ್ಲಿ ಕಾಣಿಸಿಕೊಂಡು ಇತಿಹಾಸ ಸೃಷ್ಟಿಸಿದರು. ಒನಕೆ ಓಬವ್ವನ ಹಾಡಿನಲ್ಲಿ ಜಯಂತಿಯವರ ಅಭಿನಯ ಇಂದಿಗೂ ಜನಪ್ರಿಯ.
ಜಯಂತಿ 6 ಬಾರಿ ಅತ್ಯುತ್ತಮ ನಟಿ ಪ್ರಶಸ್ತಿಗೆ ಭಾಜನರಾಗಿದ್ದರು. 1960 ರಿಂದ 1980ರ ದಶಕದವರೆಗೂ ಚಿತ್ರರಂಗದಲ್ಲಿ ಬೇಡಿಕೆ ಉಳಿಸಿಕೊಂಡಿದ್ದರು. ಎಡಕಲ್ಲು ಗುಡ್ಡದ ಮೇಲೆ, ಮನಸ್ಸಿನಂತೆ ಮಾಂಗಲ್ಯ, ಧರ್ಮ ದಾರಿ ತಪ್ಪಿತ್ತು, ಮಸಣದ ಹೂವು, ಆನಂದ್, ಟುವಿ ಟುವಿ ಟುವಿ ಚಿತ್ರಗಳಿಗೆ ಜಯಂತಿ ರಾಜ್ಯ ಪ್ರಶಸ್ತಿ ಪಡೆದಿದ್ದ ನಟಿ ಜಯಂತಿ, ‘ಮಿಸ್ ಲೀಲಾವತಿ’ ಚಿತ್ರದ ಅಭಿನಯಕ್ಕಾಗಿ ರಾಷ್ಟ್ರಪ್ರಶಸ್ತಿಯನ್ನೂ ಮುಡಿಗೇರಿಸಿಕೊಂಡಿದ್ದರು.