ಬೆಂಗಳೂರು: ಕೊರೋನಾ ಸೋಂಕಿಗೆ ತುತ್ತಾಗಿರುವ ಎಐಡಿಎಂಕೆಯ ಉಚ್ಛಾಟಿತ ನಾಯಕಿ ಶಶಿಕಲಾ ನಗರದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು ಶಶಿಕಲಾ ಅವರು ಆಸ್ಪತ್ರೆಯಿಂದ ಬಿಡುಗಡೆಯಾಗಬೇಕಿತ್ತು. ಆದರೆ ಇಂದು ಅವರಿಗೆ ಮತ್ತೊಮ್ಮೆ ಕೋವಿಡ್-19 ಪರೀಕ್ಷೆ ಮಾಡುವುದಾಗಿ ವೈದ್ಯರು ಹೇಳಿದ್ದಾರೆ. ಕೋವಿಡ್- 19 ಪರೀಕ್ಷೆಯ ಕಾರಣದಿಂದ ಶಶಿಕಲಾ ಅವರು ಆಸ್ಪತ್ರೆಯಿಂದ ನಾಳೆ ಬಿಡುಗಡೆಯಾಗಲಿದ್ದಾರೆ. ಹೀಗಾಗಿ ಇಂದೇ ಚೆನ್ನೈಗೆ ತೆರಳುವ ನಿರೀಕ್ಷೆಯಲ್ಲಿದ್ದ ಶಶಿಕಲಾ ಅವರ ನಿರೀಕ್ಷೆ ಸುಳ್ಳಾಗಿದೆ. ಈಗಾಗಲೇ ಆಸ್ಪತ್ರೆ ಶಶಿಕಲಾ ಅವರ ಆರೋಗ್ಯಕ್ಕೆ ಸಂಬಂಧಿಸಿದಂತೆ ಹೆಲ್ತ್ ಬುಲೆಟಿನ್ ನ್ನು ಬಿಡುಗಡೆ ಮಾಡಿದೆ. ಅವರ ಆರೋಗ್ಯ ಸ್ಥಿರವಾಗಿದ್ದು, ಆರೋಗ್ಯದಲ್ಲಿ ಸುಧಾರಣೆ ಕಂಡುಬಂದಿದೆ. ಆಕ್ಸಿಜನ್ ಸಪೋರ್ಟ್ ಇಲ್ಲದೆಯೇ ಸಾಮಾನ್ಯವಾಗಿ ಅವರು ಉಸಿರಾಡುತ್ತಿದ್ದಾರೆ ಎಂದು ಆಸ್ಪತ್ರೆ ಹೇಳಿದೆ.
ನಾಳೆ ಬಿಡುಗಡೆಯಾದ ನಂತರವೂ ಶಶಿಕಲಾ ಅವರಿಗೆ ವಿಶ್ರಾಂತಿಯ ಅಗತ್ಯವಿದೆ. ಹೀಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಾಗಲಿದ್ದಾರೆ ಎಂದು ಅವರ ಕುಟುಂಬ ಮೂಲಗಳು ಮಾಹಿತಿ ನೀಡಿವೆ. ಅಕ್ರಮ ಆಸ್ತಿ ಸಂಪಾದನೆ ಆರೋಪದಲ್ಲಿ 4 ವರ್ಷಗಳ ಹಿಂದೆ ಶಶಿಕಲಾ ಪರಪ್ಪನ ಅಗ್ರಹಾರ ಸೇರಿದ್ದರು. ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಆಪ್ತೆ ಶಶಿಕಲಾ ಅವರನ್ನು ಬರಮಾಡಿಕೊಳ್ಳಲು ಪಕ್ಷದ ಕಾರ್ಯಕರ್ತರು ಚೆನ್ನೈನಲ್ಲಿ ಭರ್ಜರಿ ತಯಾರಿ ಮಾಡಿಕೊಂಡಿದ್ದಾರೆನ್ನಲಾಗಿದೆ.