ಬೆಂಗಳೂರು : ಸರ್ಕಾರ ರೈತರಿಗೆ ಬೀಜ ಮತ್ತು ಗೊಬ್ಬರ ಉಚಿತವಾಗಿ ನೀಡಬೇಕು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರಿಗೆ ಪತ್ರ ಬರೆದಿರುವ ಅವರು, ಕೂಡಲೇ ಸಾಲ ವಿತರಣೆ ಚಟುವಟಿಕೆಗಳನ್ನು ಆರಂಭಿಸಬೇಕು ಎಂದು ತಿಳಿಸಿದ್ದಾರೆ.
ಹೆಸರು, ಉದ್ದು, ಅಲಸಂಡೆ, ತೊಗರಿ ಮುಂತಾದ ದ್ವಿದಳ ಧಾನ್ಯಗಳು ಹಾಗೂ ಸೋಯಾ, ಶೇಂಗಾ ಮುಂತಾದ ಎಣ್ಣೆ ಬೀಜಗಳನ್ನು ಹೇಗಾದರೂ ಮಾಡಿ ಸಂಗ್ರಹಿಸಿ ಬೇಡಿಕೆ ಇದ್ದಷ್ಟು ನೀಡಲು ಕೂಡಲೇ ಸಮರೋಪಾದಿಯಲ್ಲಿ ಸಮರ್ಪಕ ಕ್ರಮಗಳನ್ನು ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಸರ್ಕಾರ ಬಿತ್ತನೆ ಬೀಜಗಳನ್ನು ಸಂಗ್ರಹ ಮಾಡಿಕೊಂಡಿಲ್ಲ. ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಬಿತ್ತನೆ ಕೆಲಸಗಳು ಪ್ರಾರಂಭವಾಗುತ್ತವೆ. ಬಿತ್ತನೆ ಕಾಳನ್ನು ಒದಗಿಸಲು ಸಾಧ್ಯವಾಗುತ್ತಿಲ್ಲ. ಇಲಾಖೆ 8391 ಕ್ವಿಂಟಾಲಿಗೆ ಬದಲು ಕೇವಲ 5000 ರಿಂದ 5500 ಕ್ವಿಂಟಾಲ್ ಹೆಸರು ಕಾಳನ್ನು ವಿತರಿಸಲು ಈಗ ಹೊರಟಿದೆ. ಇಲಾಖೆಯ ಈ ಕ್ರಮ ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸರಿಯಾದ ಬೀಜಗಳು ಸಿಗದೆ ಹೋದ್ರೇ, ಉತ್ಪಾದನೆ ಕುಂಠಿತಗೊಳ್ಳುತ್ತದೆ. ನಿಜವಾದ ರಾಷ್ಟ್ರಪ್ರೇಮವೆಂದರೆ ತನ್ನ ಜನರಿಗೆ ಉತ್ತಮ ಆಹಾರವನ್ನು ನೀಡುವುದು. ಅದನ್ನು ಹೊರತುಪಡಿಸಿ ಅದಾನಿ, ಅಂಬಾನಿಗೆ ಕೈಗೆ ಆಹಾರ ಧಾನ್ಯಗಳ ವಿತರಣೆ ಹಾಗೂ ಸಂಗ್ರಹಣೆ ಕೊಡುವುದಲ್ಲ ಎಂದು ಸರ್ಕಾರಕ್ಕೆ ಸಿದ್ದರಾಮಯ್ಯ ಚಾಟಿ ಬೀಸಿದ್ದಾರೆ.