ಸತ್ತ ಮೇಲೆ ಆಸ್ತಿ ನಿನಗೇ ಸೇರುತ್ತೋ ಮಗನೇ ಎಂದು ಪರಿಪರಿಯಾಗಿ ಹೇಳಿದ್ರೂ ಕಿವಿಗಾಕಿಕೊಳ್ಳುವ ಸೌಜನ್ಯವಿಲ್ಲದ ಚಾಂಡಾಲ ಮಗ ಅಪ್ಪನ ಮೇಲೆ ಎಸಗಿರುವ ದೌರ್ಜನ್ಯ-ಕ್ರೌರ್ಯ ಎಂಥಾ ಕಲ್ಲು ಮನಸನ್ನೂ ಕರಗಿಸುತ್ತದೆ. ಅಂತದ್ದೊಂದು ಅಮಾನವೀಯ ಘಟನೆ ರಾಜನಗರ ಜಿಲ್ಲೆಯಲ್ಲಿ ನಡೆದಿದೆ.
ಕೆಎಸ್ ಆರ್ ಟಿಸಿ ರಾಮನಗರ ಡಿಪೋದಲ್ಲಿ ಚಾಲಕ ಕುಮಾರ, ತನ್ನ ಹೆಸರಿಗೆ ಮನೆ ಬರೆದುಕೊಟ್ಟಿಲ್ಲ ಅಂತ ಅಪ್ಪನನ್ನೇ ಹೊಡೆದು ಬಡಿದು ಮನೆಯಿಂದ ಹೊರಗೆ ಹಾಕಿದ್ದಾನೆ.
5 ಸದಸ್ಯರ ತುಂಬು ಕುಟುಂಬ.ಮೂವರು ಸಹೋದರರ ಜತೆ ಹುಟ್ಟಿದವ. ಇನ್ನುಳಿದ ಇಬ್ಬರು ಗಂಡು ಮಕ್ಕಳ ಬಗ್ಗೆ ತಕರಾರಿಲ್ಲ.ಆದ್ರೆ ಅಪ್ಪ ತಿಮ್ಮಯ್ಯ,ಅವ್ವ ಮುನಿಯಮ್ಮಳನ್ನು ಮನೆಯಲ್ಲಿ ಇಟ್ಟುಕೊಂಡು ಸಾಕುತ್ತಿದ್ದಾತನಿಗೆ ಇದ್ದಕ್ಕಿದ್ದಂತೆ ಮನೆ ಮೇಲೆ ಕಣ್ಣು ಬಿದ್ದಿದೆ.ಆ ವಿಚಾರವನ್ನು ತಲೆಗೆ ತುಂಬಿದಾಕೆ ಆತನ ಹೆಂಡ್ತಿ ವರಲಕ್ಷ್ಮಿ ಅಂತೆ.
ದಿನಕಳೆದಂತೆಲ್ಲಾ ವಯಸ್ಸಾಗುತ್ತಿದ್ದ ತಿಮ್ಮಯ್ಯನ ಆರೋಗ್ಯವೂ ಕ್ಷೀಣಿಸಲು ಶುರುವಾಯ್ತು. ಮುನಿಯವ್ವಳದು ಮನೆಯಲ್ಲಿ ಏನೇ ಆದರೂ ಮೌನಧಾರಣೆ. ಪ್ರಶ್ನಿಸಿದರೆ ಆ ಸಿಟ್ಟು-ಕ್ರೌರ್ಯಕ್ಕೆ ತಾನೆಲ್ಲಿ ಈಡಾಗುತ್ತೇನೋ ಎನ್ನುವ ಸಹಜವಾದ ಅಳುಕು.ಹಾಗಾಗಿನೇ ಗಂಡನ ಮೇಲೆ ದೌರ್ಜನ್ಯ ನಡೆದರೂ ಅದನ್ನು ಪ್ರಶ್ನಿಸದೆ ಎಲ್ಲಾ ನೋವನ್ನು ಮನಸಿನಲ್ಲಿಯೇ ನುಂಗಿಕೊಳ್ಳುತ್ತಿದ್ದ ಅಸಹಾಯಕ ತಾಯಿ.
ತಿಮ್ಮಯ್ಯ ನಡೆದು ಓಡಾಡೊಕ್ಕೆ ಸಾಧ್ಯವಾಗದ ಸ್ತಿತಿ ತಲುಪಿದಾಗ ಕುಮಾರನ ತಲೆಯನ್ನು ಕೆಡಿಸಿದ ವರಲಕ್ಷ್ಮಿ ಮನೆಯನ್ನು ತನ್ನಹೆಸರಿಗೆ ಬರೆಯಿಸಿಕೊಳ್ಳುವಂತೆ ಒತ್ತಾಯಿಸಲಾರಂಭಿಸಿದ್ದಾಳೆ.ತಲೆ ತಿರುಕ ಮಗ ಮೂಗ ಬಸವನಂತೆ ತಲೆ ಅಲ್ಲಾಡಿಸುತ್ತಲೇ ಅಪ್ಪನನ್ನು ಬೈಯ್ಯೋದು, ಹೊಡೆಯೊಕ್ಕೆ ಶುರುವಿಟ್ಟುಕೊಂಡಿದ್ದಾನೆ. ಸರಿಯಾಗಿ ಊಟ ಕೊಡದೆ ಪೀಡಿಸಲಾರಂಭಿಸಿದ್ದಾನೆ.ಸ್ವಾಭಿಮಾನಿ ತಿಮ್ಮಯ್ಯ ತನ್ನ ಕೈಲಾದಷ್ಟು ವಿರೋಧಿಸಿದ್ದಾನೆ.ಆದ್ರೆ ಕಸುವಿನ ಕೊರತೆಯಿಂದಾಗಿ ಹೊಡೆತ ತಿಂದು ಮೂಲೆಯಲ್ಲಿ ಅಳುತ್ತಾ ದಿನ ಕಳೆಯೋದು ಮಾಮೂಲಾಗಿ ಹೋಗಿದೆ.
ಇದ್ದೊಂದು ಮನೆಯನ್ನು ಮಗನ ಹೆಸರಿಗೆ ಬರುದ್ರೆ ತಾನು..ತನ್ನ ಹೆಂಡ್ತಿ ಕೇರ್ ಆಫ್ ಫುಟ್ಪಾತ್ ಗ್ಯಾರಂಟಿ ಎನ್ನುವ ಕಾರಣದಿಂದಲೇ ಒಲ್ಲೆ ಎನ್ನುತ್ತಾ ಬಂದಿದ್ದ ತಿಮ್ಮಯ್ಯ.ಆದ್ರೆ ದಿನ ಬೆಳಗಾದ್ರೆ ಇದೇ ವಿಷಯಕ್ಕೆ ಹೊಡೆತ ತಿಂದು ತಿಂದು ಸುಸ್ತಾಗಿದ್ದ ವೃದ್ಧ ರಾಮನಗರದ ಟೌನ್ ಠಾಣೆಗೂ ದೂರು ಕೊಟ್ಟಿತ್ತಂತೆ.
ಪೊಲೀಸ್ರು ಮನೆಯ ಕಾಮನ್ ಪ್ರಾಬ್ಲಮ್ ಎಂದ್ಕೊಂಡು ಬುದ್ದಿವಾದ ಹೇಳಿ ಕಳುಹಿಸಿದ್ದಾರೆ.ಆದ್ರೆ ಇದನ್ನೇ ಸಲುಗೆಯನ್ನಾಗಿಸಿಕೊಂಡ ಗಢವ ಕುಮಾರ ಅಪ್ಪ ತಿಮ್ಮಯ್ಯನನ್ನು ಮನಸೋಇಚ್ಛೆ ಥಳಿಸುವ ದುಷ್ಟತನಕ್ಕೆ ಕೈ ಹಾಕಿ ಎಲ್ಲರಿಂದ ಛೀ.ಥೂ ಎನಿಸಿಕೊಂಡಿದ್ದಾನೆ. ತಂದೆಯನ್ನು ಹೊಡೆದು ಮನೆಯಿಂದ ಹೊರ ದೂಡುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವೃದ್ಧಾಪ್ಯದಲ್ಲಿ ಪೋಷಕರನ್ನು ಚೆನ್ನಾಗಿ ಆರೈಕೆ ಮಾಡೋದನ್ನು ಬಿಟ್ಟು ಮನೆಗಾಗಿ ಅಪ್ಪನ ಮೇಲೆ ಕೈ ಮಾಡಿ ಮನೆಯಿಂದಲೇ ಹೊರ ದೂಡುವಂಥ ಕುಮಾರನ ಪೌರುಷತ್ವಕ್ಕೆ ಇಡೀ ಕೆಎಸ್ ಆರ್ ಟಿಸಿ ನೌಕರ ಸಮುದಾಯ ಕೆಂಡಾಮಂಡಲವಾಗಿದೆ. ಇಂಥಾ ಮಗ ಇಡೀ ಕೆಎಸ್ ಆರ್ ಟಿಸಿಗೆ ಕಳಂಕ.ಇಂಥವನನ್ನು ಉಳಿಸಿಕೊಂಡ್ರೆ ನಿಗಮಕ್ಕೆ ಕೆಟ್ಟ ಹೆಸರು ಬರುತ್ತದೆ ಎಂದು ಕಿಡಿಕಾರಿರುವ ನೌಕರರು ಕೆಲಸದಿಂದ ವಜಾಗೊಳಿಸಿ ಬುದ್ದಿ ಕಲಿಸಬೇಕು ಎಂದು ಆಡಳಿತವನ್ನು ಮನವಿ ಮಾಡಿಕೊಂಡಿದ್ದಾರೆ.ನೌಕರರಲ್ಲೇ ಕೆಲವರು ಈ ಪ್ರಕರಣದ ಹಿನ್ನಲೆಯಲ್ಲಿ ಮಾನವ ಹಕ್ಕುಗಳ ಆಯೋಗದ ಮೆಟ್ಟಿಲೇರಲು ಮುಂದಾಗಿದ್ದಾರೆ.