ಮಾಲ್ಡೀವ್ಸ್: ರಾತ್ರಿ ಹೊತ್ತು ಶುಭ್ರ ಆಕಾಶದಲ್ಲಿ ಕಾಣುವ ನಕ್ಷತ್ರಗಳು ಎಂಥವರನ್ನೂ ಸೆಳೆಯುತ್ತವೆ. ಆಗಸದಲ್ಲಿ ಕಾಣುವ ನಕ್ಷತ್ರ ಲೋಕ ಹಿತವಾದ ಅನುಭವವನ್ನು ನೀಡುತ್ತದೆ. ಇಂಥಹದ್ದೇ ಅನನ್ಯ ಅನುಭವದ ಬೀಚ್ ಒಂದಿದೆ. ಈ ಬೀಚ್ ನ್ನು ರಾತ್ರಿ ನೋಡಿದಾಗ ಅಲೆಗಳು ನಕ್ಷತ್ರಗಳನ್ನೇ ಹೊತ್ತು ತರುತ್ತಿವೆಯೇನೋ ಎಂಬ ಭಾವನೆ ಮೂಡುವುದು ಸುಳ್ಳಲ್ಲ. ಇದೊಂದು ಅಪರೂಪದ ಬೀಚ್. ಇದು ಇರುವುದು ಮಾಲ್ಡೀವ್ಸ್ ನಲ್ಲಿ. ಈ ಸಮುದ್ರದ ನೀರಿನ ಬಣ್ಣ ಕೆಂಪು. ಈ ಸಮುದ್ರದಲ್ಲಿ ‘ಪೈಥೋಪ್ಲಾಂಕ್ಟನ್ಸ್’ ಎಂಬ ಅಪರೂಪದ ತೇಲುವ ಸಸ್ಯಗಳಿವೆ. ಈ ಸಸ್ಯಗಳೊಂದಿಗೆ ಲವಣ ಮಿಶ್ರಿತ ನೀರು ಕೂಡುವುದರಿಂದ ಇಲ್ಲಿನ ನೀರಿನ ಬಣ್ಣ ಕೆಂಪು. ಆದರೆ ಈ ಸ್ಸಯಗಳು ಬಲು ಅಪಾಯಕಾರಿ. ಜಲಚರ ಜೀವಿಗಳು ಅಥವಾ ಮನುಷ್ಯರು ಈ ಸಸ್ಯವನ್ನು ಸೇವಿಸಿದಲ್ಲಿ ಜೀವಕ್ಕೆ ಅಪಾಯ ಕಟ್ಟಿಟ್ಟದ್ದು. ಈ ಸಸ್ಯಗಳು ಅತಿ ಹೆಚ್ಚು ವಿಷವನ್ನು ಹೊಂದಿವೆ ಎಂದು ಸಂಶೋಧಕರು ಹೇಳುತ್ತಾರೆ. ರಾತ್ರಿಯಾದಂತೆಲ್ಲ ಇಲ್ಲಿಯ ಅಲೆಗಳು ಹೊಳೆಯುತ್ತವೆ. ಹೀಗಾಗಿ ಈ ಬೀಚ್ ‘ಸ್ಟಾರಿ ಬೀಚ್’ ಎಂತಲೇ ಪ್ರಸಿದ್ಧಿ ಪಡೆದಿದೆ. ಇಲ್ಲಿನ ಕ್ರಿಸ್ಟಲ್ ಕ್ಲಿಯರ್ ನೀರು ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತದೆ.

ಬೀಚ್ ಹೊಳೆಯಲು ಕಾರಣವೇನು?
ಈ ತೇಲುವ ಸಸ್ಯಗಳು ಆಮ್ಲೀಯ ಬದಲಾವಣೆಗೆ ಒಳಗಾಗಿ, ಅತಿಯಾದ ನೀರಿನ ಒತ್ತಡಕ್ಕೆ ಸಿಲುಕುತ್ತವೆ. ಇದರಿಂದಲೇ ತೇಲಿ ಬರುವ ಅಲೆಗಳು ಮಿಂಚನ್ನು ಹೊತ್ತು ತರುತ್ತಿರುವಂತೆ ಭಾಸವಾಗುತ್ತದೆ. ಈ ಅಲೆಗಳನ್ನು ನೀವು ಮುಟ್ಟಿ ಸಹ ಎಂಜಾಯ್ ಮಾಡಬಹುದು. ಈ ಅಲೆಗಳಿಂದಲೇ ಈ ಬೀಚ್ ಪ್ರಸಿದ್ಧಿಯಾಗಿದ್ದು ಹೆಚ್ಚು ಜನರನ್ನು ಆಕರ್ಷಿಸುತ್ತದೆ. ಮಾಲ್ಡೀವ್ಸ್ ಅತ್ಯದ್ಭುತ ಪ್ರಾಕೃತಿಕ ತಾಣಗಳಲ್ಲೊಂದು. ಅದರಲ್ಲೂ ಈ ಬೀಚ್ ನೊಡಲು ದಿನನಿತ್ಯ ಸಾವಿರಾರು ಪ್ರವಾಸಿಗರು ಆಗಮಿಸುತ್ತಾರೆ. ನಕ್ಷತ್ರಗಳ ಲೋಕವನ್ನು ಸ್ಪರ್ಷಿಸಿ ಎಂಜಾಯ್ ಮಾಡುವ ಆಸೆಯಿದ್ದರೆ ನೀವೂ ಒಮ್ಮೆ ಮಾಲ್ಡೀವ್ಸ್ ಗೆ ತೆರಳಿ. ಇಲ್ಲಿ ಸಾಕಷ್ಟು ಚಿತ್ರಗಳ ಚಿತ್ರೀಕರಣ ಸಹ ನಡೆದಿದೆ.