ನೇಪಿಟಾವ್: ಮಯನ್ಮಾರ್ ನಲ್ಲಿ ಒಂದು ವರ್ಷ ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಗಿದೆ. ಅಲ್ಲದೇ, ಮಯನ್ಮಾರ್ ಮಿಲಿಟರಿ ಅಲ್ಲಿನ ಆಡಳಿತ ಪಕ್ಷದ ನಾಯಕಿ ಅಂಗಾಸಾನ್ ಸೂಕಿಯವರನ್ನು ಬಂಧಿಸಿದೆ. ಚುನಾವನೆಯಲ್ಲಿ ಅಕ್ರಮ ನಡೆದಿದೆ ಎಂದು ಅಲ್ಲಿನ ಮಿಲಿಟರಿ ಇತ್ತೀಚಿಗಷ್ಟೇ ಆರೋಪಿಸಿತ್ತು ಈ ಹಿನ್ನೆಲೆಯಲ್ಲಿ ಇಂದು ಬೆಳ್ಳಂಬೆಳಗ್ಗೆ ಮಯನ್ನಾರ್ ನಲ್ಲಿ ಹಠಾತ್ ಬೆಳವಣಿಗೆಯಾಗಿದೆ.
ತುರ್ತು ಪರಿಸ್ಥಿತಿ ಹಿನ್ನೆಲೆಯಲ್ಲಿ ರಾಜಧಾನಿ ನೇಪಿಟಾವ್ ನ ಎಲ್ಲ ಫೋನ್ ಮತ್ತು ಅಂತರ್ಜಾಲ ಸಂಪರ್ಕಗಳನ್ನು ಕಡಿತಗೊಳಿಸಲಾಗಿದೆ. ಕಳೆದ ನವೆಂಬರ್ ನಲ್ಲಿ ನಡೆದ ಚುನಾವಣೆಯಲ್ಲಿ ಭಾರೀ ಅಕ್ರಮ ನಡೆದಿದೆ. ಆದರೆ ಈ ಅಕ್ರಮವನ್ನು ತಡೆಯುವಲ್ಲಿ ಚುನಾವಣಾ ಆಯೋಗ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಆರೋಪಿಸಿ ಇಲ್ಲಿನ ಮಿಲಿಟರಿ ತುರ್ತು ಪರಿಸ್ಥಿತಿಯನ್ನು ಘೋಷಿಸಿದೆ ಎಂದು ಸ್ಥಳೀಯ ಮಾಧ್ಯಮವೊಂದು ಸುದ್ದಿ ಬಿತ್ತರಿಸಿದೆ. ಇನ್ನು ಮಯನ್ಮಾರ್ ನಲ್ಲಿ ನಡೆದ ಈ ಹಠಾತ್ ಬೆಳವಣೆಗೆಗೆ ಭಾರತ ಸೇರಿದಂತೆ ಅನೇಕ ದೇಶಗಳು ಕಳವಳ ವ್ಯಕ್ತಪಡಿಸಿವೆ.