ಬೆಂಗಳೂರು: ಚಾಮರಾಜನಗರ ಜಿಲ್ಲೆಗೆ ಪೂರೈಕೆಯಾಗಬೇಕಾದ ನಿಗದಿತ ಪ್ರಮಾಣದ ಆಕ್ಸಿಜನ್ ಸಕಾಲಕ್ಕೆ ಜಿಲ್ಲೆಗೆ ಪೂರೈಕೆಯಾಗುವಲ್ಲಿ ವ್ಯತ್ಯಯವಾದ ಪ್ರಕರಣ ಕುರಿತು ಕೂಡಲೇ ತನಿಖೆ ನಡೆಸಿ ತಪ್ಪಿತಸ್ಥರೆಂದು ಕಂಡು ಬಂದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಕುರಿತು ಇಂದು ರಾಜ್ಯದ ಮುಖ್ಯಕಾರ್ಯದರ್ಶಿ, ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ, ರಾಜ್ಯ ಆಕ್ಸಿಜನ್ ಪೂರೈಕೆ ಉಸ್ತುವಾರಿ ಅಧಿಕಾರಿ ಡಿಐಜಿ ಪ್ರತಾಪ ರೆಡ್ಡಿಯವರೊಂದಿಗೆ ಸಭೆ ನಡೆಸಿದ್ದು, ಜಿಲ್ಲೆಗೆ ಪೂರೈಕೆಯಾಗಬೇಕಾದ ನಿಗದಿತ ಪ್ರಮಾಣದ ಆಮ್ಲಜನಕ ಯಾವುದೇ ವ್ಯತ್ಯಯವಾಗದಂತೆ ಸಕಾಲದಲ್ಲಿ ಪೂರೈಕೆ ಮಾಡಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ತಿಳಿಸಿದ್ದೇನೆ ಎಂದರು.
ಚಾಮರಾಜನಗರಕ್ಕೆ ಆಕ್ಸಿಜನ್ ಪೂರೈಕೆಯಲ್ಲಿನ ಗೊಂದಲವನ್ನು ಈ ತಕ್ಷಣವೇ ಪರಿಹರಿಸಿ ಸುಲಲಿತ ಸರಬರಾಜಿಗೆ ಕ್ರಮ ಕೈಗೊಳ್ಳುವುದಾಗಿ ಮುಖ್ಯಕಾರ್ಯದರ್ಶಿ ಭರವಸೆ ನೀಡಿದ್ದಾರೆಂದು ಸುರೇಶ್ ಕುಮಾರ್ ತಿಳಿಸಿದರು.
ಚಾಮರಾಜನಗರ ಆಸ್ಪತ್ರೆಯಲ್ಲಿ ಸಂಭವಿಸಿದ ಎಲ್ಲ 23 ಸಾವುಗಳು ಆಕ್ಸಿಜನ್ ಕೊರತೆಯಿಂದಲೇ ಆಗಿಲ್ಲ. ಆದರೆ ನಿನ್ನೆ ರಾತ್ರಿ 12.30ರಿಂದ ನಸುಕಿನ 2.30ರ ಮಧ್ಯೆ ಮಾತ್ರ ಆಕ್ಸಿಜನ್ ಕೊರತೆ ಕಂಡು ಬಂದಿದೆ. ಈ ಎಲ್ಲ 23 ಸಾವುಗಳು ನಿನ್ನೆ ಬೆಳಗ್ಗೆ 8.30ರಿಂದ ಇಂದು ಬೆಳಗ್ಗೆಯವರೆಗೆ ಸಂಭವಿಸಿವೆ. ಈ ಎಲ್ಲ ಸಾವುಗಳು ಆಕ್ಸಿಜನ್ ಕೊರತೆಯಿಂದಲೇ ಸಂಭವಿಸಿದ್ದಾಗಿಲ್ಲ ಎಂದು ಮೇಲ್ನೋಟಕ್ಕೆ ತಿಳಿದು ಬಂದಿದೆ ಎಂದು ಅವರು ಹೇಳಿದರು.