ಬಾಲಕಿಯನ್ನು ಮೇಲೆ ಅತ್ಯಾಚಾರ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನು ಕೊನೆಗೂ ಮಂಗಳೂರಿನ ಬಜ್ಪೆ ಪೊಲೀಸರು ಬಂಧಿಸಿದ್ದಾರೆ.
ಬೆಳ್ತಂಗಡಿ ತಾಲೂಕಿನ ಕನ್ನಡಿಕಟ್ಟೆ-ಮೇಲಂತಬೆಟ್ಟು ನಿವಾಸಿ ಮನೋಜ್ ಬಿ. ಶೆಟ್ಟಿ ಬಂಧಿತ ಆರೋಪಿ. 2011ರ ಜೂನ್ 24ರಂದು ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯ ಮುಚ್ಚೂರು ನೀರುಡೆಯ 7ನೇ ತರಗತಿಯ ವಿದ್ಯಾರ್ಥಿನಿ ಸಿದ್ಧಾರ್ಥ ನಗರದ ಸರಕಾರಿ ಶಾಲೆಗೆ ತೆರಳುತ್ತಿದ್ದರು.
ಈ ವೇಳೆ ಆರೋಪಿ ಮನೋಜ್ ಶೆಟ್ಟಿ ಮತ್ತು ಸ್ನೇಹಿತ ದಿನೇಶ್ ಅಮೀನ್ ಎಂಬವರು ಬಾಲಕಿಯನ್ನು ಪುಸಲಾಯಿಸಿ ಆಟೋರಿಕ್ಷಾದಲ್ಲಿ ಮನೆಗೆ ಕರೆದೊಯ್ದಿದ್ದರು. ಬೆಳಗ್ಗೆ 10 ಗಂಟೆ ಸುಮಾರಿಗೆ ಆರೋಪಿಗಳು ಬಾಲಕಿಯ ಅತ್ಯಾಚಾರಗೈದಿದ್ದಾರೆ. ಈ ವಿಷಯ ಯಾರಿಗಾದರೂ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದರು. ಈ ಬಗ್ಗೆ ಬಾಲಕಿಯ ತಾಯಿ ನೀಡಿದ ದೂರಿನ ಆಧಾರದಲ್ಲಿ ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆ ನಡೆಸಿದ ಮಂಗಳೂರು ಉತ್ತರ ಉಪ ವಿಭಾಗದ ಈ ಹಿಂದಿನ ಎಸಿಪಿ ಪುಟ್ಟ ಮಾದಯ್ಯ ಆರೋಪಿಗಳನ್ನು ಬಂಧಿಸಿ, ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ನಂತರ ಉಚ್ಚ ನ್ಯಾಯಾಲಯದಲ್ಲಿ ಜಾಮೀನು ಪಡೆದ ಆರೋಪಿ ಮನೋಜ್ ಬಿ. ಶೆಟ್ಟಿ ವಿಚಾರಣೆಯ ಸಮಯ ನ್ಯಾಯಾಲಯದ ಎದುರು ಹಾಜರಾಗದೆ ತಲೆಮರೆಸಿಕೊಂಡಿದ್ದ. ಇತ್ತ, ವಿಚಾರಣೆ ನಡೆಸಿದ ನ್ಯಾಯಾಲಯವು 2ನೇ ಆರೋಪಿ ದಿನೇಶ್ ಅಮೀನ್ ಎಂಬಾತನಿಗೆ 7 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಮತ್ತು 10 ಸಾವಿರ ರೂ. ದಂಡ ವಿಧಿಸಲಾಗಿತ್ತು.