ಕೊರೊನಾ ಸೋಂಕಿನ ಭೀತಿಯಿಂದ ದಂಪತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಮಂಗಳೂರಿನ ಚಿತ್ರಾಪುರದ ರೆಹೆಜಾ ಅಪಾರ್ಟ್ ಮೆಂಟ್ ನಲ್ಲಿ ನಡೆದಿದೆ.
ಚಿತ್ರಾಪುರದ ಫ್ಲಾಟ್ ನಲ್ಲಿ ವಾಸವಾಗಿದ್ದ ರಮೇಶ್ ಮತ್ತು ಗುಣ ಆತ್ಮಹತ್ಯೆ ಮಾಡಿಕೊಂಡ ದಂಪತಿ. ಆದರೆ ಮರಣೋತ್ತರ ಪರೀಕ್ಷೆಯಲ್ಲಿ ಕೊರೊನಾ ನೆಗೆಟಿವ್ ವರದಿ ಬಂದಿದೆ.
ಒಂದು ವಾರದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ದಂಪತಿ ಕೊರೊನಾ ಭೀತಿಯಿಂದ ಆತ್ಮಹತ್ಯೆಗೆ ನಿರ್ಧರಿಸಿದ್ದಾಗಿ ಆತ್ಮಹತ್ಯೆ ಮಾಡುವ ಮುನ್ನ ಪೊಲೀಸ್ ಕಮೀಷನರ್, ಹಿಂದೂ ಸಂಘಟನೆ ಮುಖಂಡರಿಗೆ ವಾಯ್ಸ್ ಮೆಸೇಜ್ ನಲ್ಲಿ ತಿಳಿಸಿದ್ದಾರೆ.
ಮಂಗಳೂರು ನಗರ ಪೊಲೀಸ್ ಕಮೀಷನರ್, ಹಿಂದೂ ಸಂಘಟನೆಯ ಮುಖಂಡರಾದ ಶರಣ್ ಪಂಪ್ ವೆಲ್, ಸತ್ಯಜಿತ್ ಸುರತ್ಕಲ್ ಗೆ ವಾಯ್ಸ್ ಮೆಸೇಜ್ ಕಳುಹಿಸಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಹೇಳಿಕೊಂಡಿದ್ದರು.
ಸಂದೇಶದಲ್ಲಿ ಅಂತ್ಯಕ್ರಿಯೆಗಾಗಿ 1 ಲಕ್ಷ ರೂಪಾಯಿ ಇಟ್ಟಿದ್ದು, ಇದರಲ್ಲಿ ಅಂತ್ಯಕ್ರಿಯೆ ಮಾಡಿ ಅಲ್ಲದೇ ಮನೆಯ ಉಪಕರಣ ಮಾರಿ ಬಡವರಿಗೆ ನೀಡುವಂತೆ ಮನವಿ ಮಾಡಿದ್ದಾರೆ.
ವಾಯ್ಸ್ ಮೆಸೇಜ್ ಬಂದ ಕೂಡಲೇ ಅಡ್ರೆಸ್ ಟ್ರ್ಯಾಕ್ ಮಾಡಿದ ಕಮೀಷನರ್, ಪೊಲೀಸರು ಮನೆ ತಲುಪುವ ವೇಳೆಯಲ್ಲಿ ದಂಪತಿ ಆತ್ಮಹತ್ಯೆಗೆ ಶರಣಾಗಿದ್ದರು. ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.