ನಮ್ಮ ಬಳಿ ಮಿಸೈಲ್ ಇದೆ. ಬಾಂಬ್ ಇದೆ ಅಂತಿರಲ್ಲಾ.. ನೀವು ಶಾಸಕರೊ ಅಥವಾ ಟೆರರಿಸ್ಟ್ ಗಳೋ? ಹೀಗೆ ನನ್ನ ವಿರುದ್ಧ ಮಾತನಾಡಿದ್ದಕ್ಕೆ ಜನ ಬುದ್ದಿ ಕಲಿಸಿದ್ದಾರೆ. ಇನ್ನೂ ಬುದ್ದಿ ಬಂದಿಲ್ಲ ಅಂದರೆ ಜನ ಮತ್ತೆ ಬುದ್ದಿ ಕಲಿಸುತ್ತಾರೆ ಎಂದು ಸಂಸದೆ ಸುಮಲತಾ ಅಂಬರೀಶ್ ತಿರುಗೇಟು ನೀಡಿದ್ದಾರೆ.
ಮಂಡ್ಯದ ಬೇಬಿ ಬೆಟ್ಟದಲ್ಲಿನ ಅಕ್ರಮ ಗಣಿಗಾರಿಕೆ ಪ್ರದೇಶಗಳಿಗೆ ಬುಧವಾರ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಮುಖ್ಯಮಂತ್ರಿ ಮತ್ತು 8 ಶಾಸಕರ ವಿರುದ್ಧ ಹೋರಾಡಿ ಗೆದ್ದವಳು. ನಿಮ್ಮ ಮಾತುಗಳಿಂದ ಜನರು ಮೋಸ ಹೋಗ್ತಾರೆ ಅಂದುಕೊಂಡಿದ್ದರೆ ನೋ ವೇ ಚಾನ್ಸೆ ಇಲ್ಲ ಎಂದರು.
ಪ್ರಜ್ವಲ್ ರೇವಣ್ಣಗೆ ಒಳ್ಳೆಯ ಭವಿಷ್ಯ ಇದೆ ಎಂಬ ಹೇಳಿಕೆ ದೇವೇಗೌಡರ ಕುಟುಂಬ ಒಡೆಯುವ ಉದ್ದೇಶದಿಂದ ಕೂಡಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಸುಮಲತಾ, ದೇವೇಗೌಡರ ಕುಟುಂಬ ಒಡೆದು ನನಗೇನೂ ಆಗಬೇಕಿಲ್ಲ. ಅದರಿಂದ ನನಗೆ ಲಾಭವೂ ಇಲ್ಲ. ಅಣ್ಣನ ಮಗ ಪ್ರಜ್ವಲ್ ಹೊಗಳಿದರೆ ಇವರಿಗೆ ಖುಷಿ ಆಗಬೇಕು. ಸಿಟ್ಟು ಯಾಕೆ ಎಂದು ಅವರು ಪ್ರಶ್ನಿಸಿದರು.
ಸಿನಿಮಾದಲ್ಲಿ ರಾಜಕೀಯ, ನಟನೆ ಬಗ್ಗೆ ಮಾತನಾಡುವ ಹಕ್ಕು ನಿಮಗಿಲ್ಲ. ಅವರು ಕೇವಲ ತೆರೆಯ ಮೇಲೆ ನಟಿಸುತ್ತಾರೆ. ಆದರೆ ನೀವು ಅದಕ್ಕಿಂತ ಚೆನ್ನಾಗಿ ನಟಿಸುತ್ತಿದ್ದೀರಿ. ನಿಮ್ಮ ರಾಜಕಾರಣದ ಡ್ರಾಮ ಇನ್ನು ಮುಂದೆ ನಡೆಯಲ್ಲ. ನಿಮ್ಮ ತಪ್ಪನ್ನು ತಿದ್ದಿಕೊಳ್ಳಲು ನೀವು ತಯಾರಿಲ್ಲ. ಇದು ಹೊಸದೇನೂ ಅಲ್ಲ. ಅಂಬರೀಶ್ ಮುಂದೆ ನಿಂತುಕೊಳ್ಳುವುದಕ್ಕೂ ಹೆದರುತ್ತಿದ್ದವರು ಈಗ ಮಾತನಾಡುತ್ತಿದ್ದಾರೆ ಎಂದು ಅವರು ಹೇಳಿದರು.
ಅಕ್ರಮ ಗಣಿಗಾರಿಕೆ ಪ್ರದೇಶಕ್ಕೆ ಭೇಟಿ ನೀಡಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಗಣಿ ಸಚಿವರನ್ನು ಕರೆದುಕೊಂಡು ಹೋಗಿ ದಂಡ ಹಾಕಿಸಿದ್ದೆ. ಅಕ್ರಮ ಗಣಿಗಾರಿಕೆ ತಡೆಯುವುದು ಮುಖ್ಯ. ನನ್ನನ್ನು ಸೋಲಿಸುವುದೇ ನಿಮ್ಮ ಗುರಿ ಆದರೆ ಅದಕ್ಕೆ ಸ್ವಾಗತ ಎಂದು ಅವರು ಪ್ರತಿ ಸವಾಲು ಹಾಕಿದರು.