ನವದೆಹಲಿ: ಸೂಪರ್ ಸ್ಟಾರ್ ರಜಿನಿಕಾಂತ್ ಅವರು ಈ ವರ್ಷದ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಆಯ್ಕೆಯಾಗಿದ್ಧಾರೆ. ಮಾಹಿತಿ ಮತ್ತು ಪ್ರಸರಣ ಸಚಿವ ಪ್ರಕಾಶ್ ಜಾವಡೇಕರ್ ಈ ಪ್ರಶಸ್ತಿಯನ್ನು ಇಂದು ಘೋಷಿಸಿದ್ದಾರೆ. ಸೂಪರ್ ಸ್ಟಾರ್ ರಜನಿಕಾಂತ್ ಅವರಿಗೆ 51ನೇ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಈ ಪ್ರಶಸ್ತಿ ಪಡೆದ 12ನೇ ದಕ್ಷಿಣ ಭಾರತೀಯ ರಜನಿಕಾಂತ್. ಡಾ.ರಾಜ್ ಕುಮಾರ್, ಅಕ್ಕಿನೇನಿ ನಾಗೇಶ್ವರ್ ರಾವ್, ಕೆ.ಬಾಲಚಂದರ್ ರಂತಹ ದಂತಕತೆಗಳಿಗೆ ಈ ಹಿಂದೆ ಪ್ರಶಸ್ತಿ ನೀಡಲಾಗಿದೆ. ಭಾರತದ ಸಿನಿಮಾ ಇತಿಹಾಸದಲ್ಲೇ ಅತ್ಯಂತ ಶ್ರೇಷ್ಠ ನಟರಲ್ಲಿ ಅವರೊಬ್ಬರು. ನಟನಾಗಿ, ನಿರ್ಮಾಪಕನಾಗಿ ಮತ್ತು ಚಿತ್ರಕಥೆಗಾರನಾಗಿ ಅವರು ನೀಡಿರುವ ಕೊಡುಗೆ ಅಪಾರವಾದುದು ಎಂದು ಇದೇ ಸಂದರ್ಭದಲ್ಲಿ ಕೇಂದ್ರ ಸಚಿವರು ಸ್ಮರಿಸಿದ್ದಾರೆ.
ದಾದಾ ಸಾಹೇಬ್ ಫಾಲ್ಕೆ ಅವರು ಭಾರತೀಯ ಸಿನಿರಂಗದ ಪಿತಾಮಹ ಎಂದೇ ಪರಿಗಣಿಸಲ್ಪಟ್ಟಿದ್ಧಾರೆ. 1913ರಲ್ಲಿ ಭಾರತದ ಮೊದಲ ಸಿನಿಮಾದಲ್ಲಿ ಅವರು ನಟಿಸಿದ್ದರು. ಅವರ ಹೆಸರಿನಲ್ಲಿರುವ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯು ಭಾರತೀಯ ಸಿನಿಮಾ ರಂಗದ ಅತ್ಯುಚ್ಛ ಪ್ರಶಸ್ತಿ ಎಂದು ಪರಿಗಣಿಸಲಾಗಿದೆ. ಒಟ್ಟಾರೆ ಭಾರತೀಯ ಚಿತ್ರರಂಗಕ್ಕೆ ನೀಡಿರುವ ಕೊಡುಗೆಯನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಲಾಗುತ್ತದೆ. ಈ ಪ್ರಶಸ್ತಿಯಲ್ಲಿ ಸ್ವರ್ಣ ಕಮಲ ಪದಕ ಹಾಗೂ 10 ಲಕ್ಷ ರೂ ನಗದು ಬಹುಮಾನ ಒಳಗೊಂಡಿರುತ್ತದೆ.