ಶ್ರೀನಗರ: ಶ್ರೀನಗರದ ರೈಲ್ವೇ ನಿಲ್ದಾಣದ ಬಳಿ ಸುಧಾರಿತ ಸ್ಫೋಟಕಗಳು ಪತ್ತೆಯಾಗಿವೆ. ಶ್ರೀನಗರ-ಬಾರಾಮುಲ್ಲಾ ಹೆದ್ದಾರಿಯ ಉದಮಪುರ-ಶ್ರೀನಗರ-ಬಾರಾಮುಲ್ಲಾ ರೈಲ್ವೇ ಸೇತುವೆ ಬಳಿ ಸ್ಫೋಟಕಗಳು ಪತ್ತೆಯಾಗಿದ್ದು, ಆತಂಕಕ್ಕೆ ಕಾರಣವಾಗಿದೆ. ಸುದ್ದಿ ತಿಳಿಯುತ್ತಿದ್ದಂತೆಯೇ ಬಾಂಬ್ ನಿಷ್ಕ್ರಿಯ ದಳ ಸ್ಥಳಕ್ಕಾಗಮಿಸಿದೆ. 11 ತಿಂಗಳ ಬಳಿಕ ಇಂದಿನಿಂದ ಇಲ್ಲಿ ರೈಲ್ವೇ ಸಂಚಾರ ಆರಂಭವಾಗಲಿದೆ. ಹೀಗಿರುವಾಗ ಸ್ಫೋಟಕಗಳು ಸಿಕ್ಕಿವೆ. ಉದಮಪುರ-ಶ್ರೀನಗರ-ಬಾರಾಮುಲ್ಲಾ ನಡುವಿನ ರೈಲ್ವೇ ಲಿಂಕ್ ಆರಂಭಗೊಳ್ಳಲಿದೆ. ಜಮ್ಮು ಕಾಶ್ಮೀರ ದೇಶದ ವಿವಿಧ ನಗರಗಳೊಂದಿಗೆ ಸಂಪರ್ಕ ಹೊಂದಲಿದ್ದು, ಮುಂದಿನ ವರ್ಷದ ಅಂತ್ಯದಲ್ಲಿ ಈ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಪಿಯೂಷ್ ಗೋಯಲ್ ಮಾಹಿತಿ ನೀಡಿದ್ದರು.
ಇನ್ನು, ಶ್ರೀನಗರ ಬಳಿಯಿರುವ ಸಾಂಬಾದಲ್ಲಿ ಕಳೆದ ಶನಿವಾರ ರಾತ್ರಿ 15 ಸಣ್ಣ ಸುಧಾರಿತ ಸ್ಫೋಟಕಗಳು ಮತ್ತು 6 ಪಿಸ್ತೂಲ್ ಗಳನ್ನು ವಶಕ್ಕೆ ಪಡೆಯಲಾಗಿತ್ತು. ಈ ಘಟನೆಗೆ ಸಂಬಂಧಿಸಿದಂತೆ ಅಬಿದ್ ನಾಯಕ್ ಮತ್ತು ಚಂಡೀಘರ್ ಮೂಲದ ಕ್ವಾಜಿ ವಾಸಿಮ್ ಎಂಬ ಆರೋಪಿಗಳನ್ನು ಬಂಧಿಸಿ ವಿಚಾರಣೆಗೊಳಪಡಿಸಲಾಗಿದೆ ಎಂದು ಜಮ್ಮು ಪೊಲೀಸ್ ಆಯುಕ್ತ ಮುಕೇಶ್ ಸಿಂಗ್ ಮಾಹಿತಿ ನೀಡಿದ್ದರು.