ಕೇವಲ 2 ಸೆಕೆಂಡ್ ನಲ್ಲಿ 60 ಕಿ.ಮೀ.ವೇಗ: ಸಂಚಲನ ಮೂಡಿಸಲು ಸಿದ್ಧವಾದ ಟೆಸ್ಲಾ ಕಾರು
ಬೆಂಗಳೂರು: ಅಮೇರಿಕದ ಮೂಲದ ಎಲೆಕ್ಟ್ರಿಕ್ ಕಾರು ಉತ್ಪಾದನಾ ಕಂಪನಿ ಈ ವರ್ಷ ಚಮತ್ಕಾರ ಮಾಡಲು ಸಿದ್ಧವಾಗಿದೆ. ವಿಶ್ವದ ಎಲ್ಲ ಕಡೆಗಳಲ್ಲೂ ಸದ್ದು ಮಾಡುವುದರೊಂದಿಗೆ ತನ್ನ ಬೇಡಿಕೆಯನ್ನು ಟೆಸ್ಲಾ ಹೆಚ್ಚಿಸಿಕೊಂಡಿದೆ. ಇದೀಗ ಟೆಸ್ಲಾ ಕಂಪನಿಯ ಸಿಇಒ ಎಲಾನ್ ಮಸ್ಕ್ ಮಾಡಿರುವ ಟ್ವೀಟ್ ಒಂದು ಕಾರು ಪ್ರಿಯರಲ್ಲಿ ಭಾರೀ ಸಂಚಲನ ಮೂಡಿಸಿದೆ.
ಟೆಸ್ಲಾ ಕಂಪನಿಯ ಎಸ್ ಮತ್ತು ಎಕ್ಸ್ ಮಾದರಿಯ ಕಾರುಗಳಿಗೆ ವಿಶ್ವಾದ್ಯಂತ ಭಾರೀ ಪ್ರಮಾಣದ ಬೇಡಿಕೆಯಿದೆ. ಕೇವಲ ಎರಡೇ ಸೆಕೆಂಡಿನಲ್ಲಿ ಈ ಕಾರುಗಳು 60 ಕಿ.ಮೀ. ವರೆಗೆ ತಮ್ಮ ವೇಗವನ್ನು ಹೆಚ್ಚಿಸಕೊಳ್ಳಬಲ್ಲವು ಎಂದು ಎಲಾನ್ ಮಸ್ಕ್ ಟ್ವೀಟ್ ಮಾಡಿದ್ದಾರೆ. ಅಲ್ಲದೇ, ಟೆಸ್ಲಾ ತನ್ನೆಲ್ಲ ಮಾದರಿಯ ಕಾರುಗಳನ್ನು ಅಪ್ ಡೇಟ್ ಮಾಡಿದೆ. ತನ್ನ ಕಾರುಗಳ ವೇಗದ ಬಗ್ಗೆ ಕಂಪನಿ ಹೆಮ್ಮೆಯಿಂದ ಹೇಳಿಕೊಂಡಿದೆ.

ಇನ್ನು, ಟೆಸ್ಲಾ ಕಂಪನಿ ಬೆಂಗಳೂರಿನಲ್ಲಿ ತನ್ನ ನೂತನ ಅಭಿವೃದ್ಧಿ ಮತ್ತು ಸಂಶೋಧನೆಗೆ ಸಂಬಂಧಿಸಿದ ಕಚೇರಿ ತೆರೆಯಲಿದೆ. ಕಂಪನಿ ಈಗಾಗಲೇ ಬೆಂಗಳೂರು ಕಚೇರಿಯ ಬಗ್ಗೆ ನೋಂದಣಿ ಮಾಡಿಕೊಂಡಿದ್ದು ಈ ಬಗ್ಗೆ ಅಧಿಕೃತ ಮಾಹಿತಿ ಹೊರಬೀಳುವುದು ಮಾತ್ರ ಬಾಕಿಯಿದೆ. ಕಳೆದ ವರ್ಷದಲ್ಲಿ ಟೆಸ್ಲಾ ಕಂಪನಿ ಸುಮಾರು 5 ಲಕ್ಷಕ್ಕೂ ಅಧಿಕ ಕಾರುಗಳನ್ನು ಮಾರಾಟ ಮಾಡಿದೆ ಎಂದು ಕಂಪನಿಯ ಮೂಲಗಳು ಹೇಳಿವೆ.