ಮಂಡ್ಯ : ಕೊರೊನಾಗೆ ಹೆದರಿ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಪಾಲಹಳ್ಳಿ ಗ್ರಾಮದ ಕುಟುಂಬವೊಂದು ಊರಲ್ಲಿ ಇದ್ದ ಮನೆಯನ್ನು ಬಿಟ್ಟು ಜಮೀನಿನಲ್ಲಿ ಗುಡಿಸಲು ನಿರ್ಮಿಸಿಕೊಂಡು ವಾಸ ಮಾಡುತ್ತಿದೆ.
ಪಾಲಹಳ್ಳಿ ಗ್ರಾಮದ ಕುಮಾರ್ ಎಂಬಾತ ಕೊರೋನಾ ಮಹಾ ಮಾರಿಗೆ ಹೆದರಿ ಪಾಲಹಳ್ಳಿ ಗ್ರಾಮದಲ್ಲಿ ಇದ್ದ ಮನೆಯನ್ನು ತೊರೆದು ತನ್ನ ಪತ್ನಿ ಹಾಗೂ ಮಕ್ಕಳ ಜೊತೆ ಜಮೀನಿನಲ್ಲಿ ಗುಡಿಸಲು ಹಾಕಿಕೊಂಡು ವಾಸ ಮಾಡುತ್ತಿದ್ದಾರೆ. ಕುಮಾರ್ ಮನೆಯ ಅಕ್ಕ-ಪಕ್ಕ ಐದಾರು ಮಂದಿಗೆ ಕೊರೊನಾ ಸೋಂಕು ತಗುಲಿತ್ತು. ಇವರಿಂದ ನಮಗೂ ಕೊರೊನಾ ತಗುಲುತ್ತದೆ ಎಂದು ಕುಮಾರ್ ಗಾಬರಿಗೊಂಡಿದ್ದಾರೆ.
ಇದಾದ ಬಳಿಕ ತನ್ನ ಹೆಂಡತಿ ಮಕ್ಕಳನ್ನು ಕರೆದುಕೊಂಡು ಊರಿನ ಹೊರ ಭಾಗವಿರುವ ತಮ್ಮ ಜಮೀನಿನಲ್ಲಿ ಗುಡಿಸಲು ಹಾಕಿಕೊಂಡು ಕಳೆದ 20 ದಿನಗಳಿಂದ ವಾಸವಿದ್ದಾರೆ.
ಊರಲ್ಲಿ ಸ್ವಂತ ಮನೆಯನ್ನು ಬಿಟ್ಟು ಬಂದಿರುವ ಕುಮಾರ್, ಮನೆಯಲ್ಲೇ ಇದ್ದು ಮುನ್ನೆಚ್ಚರಿಕಾ ಕ್ರಮಗಳನ್ನು ತೆಗದುಕೊಂಡು ಇರಬಹುದಿತ್ತು ಎಂದು ಗ್ರಾಮಸ್ಥರು ಹೇಳುತ್ತಾರೆ.