ಧಾರವಾಡ : ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ನಾಯಕತ್ವದ ವಿರುದ್ಧ ಶಾಸಕರ ಮಧ್ಯೆ ಯಾವುದೇ ಸಹಿ ಸಂಗ್ರಹ ನಡೆದಿಲ್ಲ ಎಂದು ಶಾಸಕ ಅರವಿಂದ್ ಬೆಲ್ಲದ ಸ್ಪಷ್ಟಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ರೇಸ್‍ನಲ್ಲಿ ಶಾಸಕ ಅರವಿಂದ್ ಬೆಲ್ಲದ ಇದ್ದಾರೆ, ಸಹಿ ಸಂಗ್ರಹ ಮಾಡಿದ್ದಾರೆ ಎಂಬ ಶಾಸಕ ಎಂ ಪಿ ರೇಣುಕಾಚಾರ್ಯ ಹೇಳಿಕೆಗೆ ಬೆಲ್ಲದ ಈ ಸ್ಪಷ್ಟನೆ ನೀಡಿದ್ದಾರೆ. ರೇಣುಕಾಚಾರ್ಯ ಅವರ ಹೇಳಿಕೆಗೆ ಪ್ರತಿಕ್ರಿಯೆ ಕೊಡಲಾರೆ. ಅದರ ಬಗ್ಗೆ ನಾನು ಏನೂ ಹೇಳಲಾರೆ ಎಂದಿದ್ದಾರೆ.
ಯಾವುದೇ ಸಹಿ ಸಂಗ್ರಹವನ್ನು ಹೈಕಮಾಂಡ್ ಸಹಿಸುವುದಿಲ್ಲ. ನಾಯಕತ್ವ ಬದಲಾವಣೆ ಸಂಬಂಧಿಸಿದಂತೆ ಯಾವುದೇ ಸಹಿ ಸಂಗ್ರಹ ಆಗಿಯೇ ಇಲ್ಲ. ಒಂದೇ ಸಹಿ ಸಂಗ್ರಹ ನಡೆದಿತ್ತು. ಅದು ಗ್ರಾಮೀಣಾಭಿವೃದ್ಧಿ ಇಲಾಖೆಗೆ ಸಂಬಂಧಿಸಿದ್ದು ಮಾತ್ರ. ಸದನ ಸದನ ನಡೆದಾಗ ಸಹಿ ಮಾಡಿದ್ದೇವೆ. ಅದೊಂದೆ ಸಹಿ ಸಂಗ್ರಹ ನಡೆದಿದೆ ಎಂದು ಪ್ರತಿಕ್ರಿಯಿಸಿದ್ದಾರೆ.