ಎಟಿಎಂ ಯಂತ್ರ ಒಡೆದು ಹಣ ಕದಿಯಬೇಕು ಎಂದುಕೊಳ್ಳುವಷ್ಟರಲ್ಲಿ ಸಾರ್ಜಜನಿಕರ ಕಣ್ಣಿಗೆ ಬಿದ್ದ ಇಬ್ಬರು ಕಳ್ಳರು ತಪ್ಪಿಸಿಕೊಳ್ಳಲು ಎದುರಿನಿಂದ ಬರುತ್ತಿದ್ದ ವಾಹನಕ್ಕೆ ಕೈ ತೋರಿಸಿ ಡ್ರಾಪ್ ಪಡೆದಿದ್ದಾರೆ.
ಕಾರೊಳಗೆ ಹತ್ತಿ ಬಚಾವಾದೆವು ಎಂದು ನಿಟ್ಟುಸಿರು ಬಿಡುತ್ತಿದ್ದಂತೆ ಆ ಕಾರು ನೇರವಾಗಿ ಪೊಲೀಸ್ ಠಾಣೆ ಮುಂದೆ ನಿಲ್ಲುತ್ತಿದ್ದಂತೆ ಕಳ್ಳರು ಅಚ್ಚರಿ ಜೊತೆ ಆಘಾತಕ್ಕೆ ಒಳಗಾಗಿದ್ದಾರೆ. ಏನಾಯಿತು ಎಂದು ತಿಳಿಯುವಷ್ಟರಲ್ಲಿ ತಾವು ಡ್ರಾಪ್ ಪಡೆದಿದ್ದು ಪೊಲೀಸ್ ವಾಹನದಲ್ಲಿ ಎಂದು ತಿಳಿದು ಬಂದಿದೆ.
ಇದು ಯಾವ ಸಿನಿಮಾ ಕಥೆಯೂ ಅಲ್ಲ, ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರದ ಮೇಳೆಕೋಟೆಯಲ್ಲಿ ಶನಿವಾರ ನಡೆದ ನಾಟಕೀಯ ಘಟನೆ ಇದಾಗಿದೆ.
ಎಟಿಎಂ ಕಳ್ಳತನಕ್ಕೆ ಯತ್ನಿಸಿ ಸಿಕ್ಕಿಬಿದ್ದಿದ್ದು ನೆಲಮಂಗಲ ತಾಲೂಕು ಅರಿಶಿನಕುಂಟೆ ನಿವಾಸಿಗಳಾದ ಸಚಿನ್ ಹಾಗೂ ಗಗನ್ ಎಂಬುವರು. ಆರೋಪಿಗಳನ್ನು ದೊಡ್ಡಬಳ್ಳಾಪುರ ಠಾಣೆ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಮೇಳೆಕೋಟೆ ಎಂಟಿಬಿ ಕೇಂದ್ರ ದರೋಡೆಗೆ ಯತ್ನಿಸಿದ ಕಳ್ಳರಿಬ್ಬರು ಜನರಿಂದ ತಪ್ಪಿಸಿಕೊಂಡು ಪರಾರಿಯಾಗುತ್ತಿದ್ದರು. ಇದೇ ವೇಳೆ ಮಾಹಿತಿ ಪಡೆದ ಪೊಲೀಸರು ಖಾಸಗಿ ಕಾರಿನಲ್ಲಿ ಅದೇ ಮಾರ್ಗದಲ್ಲಿ ಬರುತ್ತಿದ್ದರು. ಈ ಬಗ್ಗೆ ಅರಿವೇ ಇಲ್ಲದ ಕಳ್ಳರು ಜನರಿಂದ ತಪ್ಪಿಸಿಕೊಳ್ಳಲು ಪೊಲೀಸರಿದ್ದ ಕಾರಿಗೆ ಕೈ ಅಡ್ಡಹಾಕಿ ಡ್ರಾಪ್ ಕೇಳಿದ್ದರು. ಕಳ್ಳರನ್ನು ಹಿಡಿಯಲು ಬಂದ ಪೊಲೀಸರಿಗೆ ತುಪ್ಪ ಜಾರಿ ರೊಟ್ಟಿಗೆ ಬಿದ್ದಂತಾಯಿತು.