ಕೊರೊನಾ ಎರಡನೇ ಅಲೆಯಿಂದ ಚೇತರಿಸಿಕೊಳ್ಳುವ ಮುನ್ನವೇ ಮೂರನೇ ಅಲೆಯ ಮುನ್ಸೂಚನೆ ದೊರೆತಿದ್ದು, 6ರಿಂದ 8 ವಾರಗಳಲ್ಲಿ ಮೂರನೇ ಅಲೆ ಕಾಣಿಸಿಕೊಳ್ಳಲಿದೆ ಎಂದು ದೆಹಲಿಯ ಏಮ್ಸ್ ವೈದ್ಯ ಡಾ.ರಣದೀಪ್ ಗುಲೆರಿಯಾ ಎಚ್ಚರಿಕೆ ನೀಡಿದ್ದಾರೆ.
ಎನ್ ಡಿಟಿವಿಗೆ ನೀಡಿದ ಸಂದರ್ಶನದಲ್ಲಿ ಕೊರೊನಾ ಮೂರನೇ ಅಲೆಯ ಮುನ್ಸೂಚನೆ ಬಗ್ಗೆ ಅವರು ಎಚ್ಚರಿಕೆ ನೀಡಿದರು.
ದೇಶದಲ್ಲಿ ಕೊರೊನಾ ಲಸಿಕೆ ನಿರ್ದಿಷ್ಟ ಪ್ರಮಾಣದಲ್ಲಿ ನಡೆಯುತ್ತಿಲ್ಲ. ಮತ್ತೊಂದೆಡೆ ಹಲವು ರಾಜ್ಯಗಳು ಲಾಕ್ ಡೌನ್ ನಿಯಮಗಳನ್ನು ಸಡಿಲಗೊಳಿಸುವ ಮೂಲಕ ಜನರ ಮುಕ್ತ ಸಂಚಾರಕ್ಕೆ ಅನುವು ಮಾಡಿಕೊಡುತ್ತಿದೆ. ಈ ಹಿನ್ನೆಲೆಯಲ್ಲಿ ಎಚ್ಚರಿಕೆ ನೀಡಿದ ಅವರು, ಕೊರೊನಾ ರೂಪಾಂತರಿ ಡೆಲ್ಟಾ ಪ್ಲಸ್ ವೈರಸ್ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.
ನಾವು ಮೊದಲ ಮತ್ತು ಎರಡನೇ ಅಲೆಯಿಂದ ಪಾಠ ಕಲಿತಿಲ್ಲ. ಜನರು ಈಗಲೂ ಗುಂಪು ಗುಂಪಾಗಿ ಸೇರುತ್ತಿದ್ದಾರೆ. ಮಾಸ್ಕ್ ಸಮರ್ಪಕವಾಗಿ ಧರಿಸುತ್ತಿಲ್ಲ. ಇದರ ನಡುವೆ ಕೊರೊನಾ ದಿನಕ್ಕೊಂದು ರೂಪ ಪಡೆದು ಹರಡುತ್ತಿದ್ದು, ಜನರು ಎಚ್ಚರಿಕೆ ವಹಿಸಬೇಕಾಗಿದೆ ಎಂದು ಅವರು ಹೇಳಿದರು.