ಭಾರತ ಪುರುಷರ ಹಾಕಿ ತಂಡ 3-1 ಗೋಲುಗಳಿಂದ ಹಾಲಿ ಚಾಂಪಿಯನ್ ಅರ್ಜೆಂಟೀನಾ ತಂಡವನ್ನು ಬಗ್ಗುಬಡಿಯುವ ಮೂಲಕ ಟೋಕಿಯೊ ಒಲಿಂಪಿಕ್ಸ್ ನಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ.
ಗುರುವಾರ ನಡೆದ ಪಂದ್ಯದಲ್ಲಿ ಭಾರತದ ಪರ ವರುಣ್ ಕುಮಾರ್, ವಿವೇಕ್ ಪ್ರಸಾದ್ ಮತ್ತು ಹರ್ಮನ್ ಪ್ರೀತ್ ಸಿಂಗ್ ತಲಾ ಒಂದು ಗೋಲು ಬಾರಿಸಿ ಗೆಲುವಿನ ರೂವಾರಿಗಳಾದರು. ರಿಯೊ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ಅರ್ಜೆಂಟೀನಾ ಪರ ಮಥಾಯಿಸ್ ರೇ ಫ್ರೀ ಏಕೈಕ ಗೋಲು ಬಾರಿಸಿದರು.
ಆಸ್ಟ್ರೇಲಿಯಾ ವಿರುದ್ಧ ಸೋಲುಂಡ ನಂತರ ಎಚ್ಚೆತ್ತುಕೊಂಡಿರುವ ಭಾರತ ಆಟಗಾರರು ಪಂದ್ಯದ ಆರಂಭದಿಂದಲೂ ಹಿಡಿತ ಸಾಧಿಸಿದ್ದರು. ಎ ಗುಂಪಿನಿಂದ ಭಾರತ ಹಾಗೂ ಅಗ್ರಸ್ಥಾನಿ ಆಸ್ಟ್ರೇಲಿಯಾ ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ.