ಭಾರತದ ವಿನೋದ್ ಕುಮಾರ್ ಡಿಸ್ಕಸ್ ಎಸೆತ ಸ್ಪರ್ಧೆಯಲ್ಲಿ ಕಂಚಿನ ಪದಕ ಸಂಪಾದಿಸಿದ್ದಾರೆ. ಈ ಮೂಲಕ ಟೋಕಿಯೊ ಪ್ಯಾರಾಲಿಂಪಿಕ್ಸ್ ನಲ್ಲಿ ಒಂದೇ ದಿನ ಭಾರತ 3 ಪದಕಗಳನ್ನು ಬಾಚಿಕೊಂಡು ದಾಖಲೆ ಬರೆದಿದೆ.
ಭಾನುವಾರ ನಡೆದ ಪುರುಷರ ಡಿಸ್ಕಸ್ ಎಸೆತ ಸ್ಪರ್ಧೆಯ ಎಫ್ 52 ವಿಭಾಗದಲ್ಲಿ ವಿನೋದ್ ಕುಮಾರ್ 19.91 ಮೀ. ದೂರ ದಾಖಲಿಸಿ ಏಷ್ಯನ್ ದಾಖಲೆ ಮುರಿಯುವ ಮೂಲಕ ಕಂಚಿನ ಪದಕ ಗೆದ್ದುಕೊಂಡರು.
ಪ್ಯಾರಾಲಿಂಪಿಕ್ಸ್ ನ 5ನೇ ದಿನವಾದ ಭಾನುವಾರ ಭಾರತ 3 ಪದಕ ಗೆದ್ದುಕೊಂಡಿದ್ದು, 2016ರ ರಿಯೋ ಒಲಿಂಪಿಕ್ಸ್ ನಲ್ಲಿ 4 ಪದಕದ ದಾಖಲೆ ಸರಿಗಟ್ಟಲು ಕೇವಲ ಒಂದು ಪದಕ ಬೇಕಿದೆ. ಇದಕ್ಕೂ ಮುನ್ನ ಟೇಬಲ್ ಟೆನಿಸ್ ನಲ್ಲಿ ಭಾವಿಯಾ ಪಟೇಲ್ ಮತ್ತು ಹೈ ಜಂಪ್ ನಲ್ಲಿ ನಿಶಾದ್ ಕುಮಾರ್ ಬೆಳ್ಳಿ ಪದಕ ಗೆದ್ದುಕೊಂಡಿದ್ದರು.
ಭಾರತೀಯ ಯೋಧನಾಗಿರುವ ವಿನೋದ್ ಕುಮಾರ್ ಅಪಘಾತವೊಂದರಲ್ಲಿ ಪಾರ್ಶ್ವವಾಯು ಪೀಡಿತರಾಗಿ ಸುಮಾರು ಒಂದು ದಶಕದ ಕಾಲ ಹಾಸಿಗೆ ಹಿಡಿದಿದ್ದರು. ಆದರೆ 2016ರ ರಿಯೊ ಒಲಿಂಪಿಕ್ಸ್ ನಿಂದ ಸ್ಫೂರ್ತಿ ಪಡೆದು ಸತತ ಅಭ್ಯಾಸ ನಡೆಸಿದ್ದೂ ಅಲ್ಲದೇ ಮೊದಲ ಪ್ರಯತ್ನದಲ್ಲಿ ಕಂಚಿನ ಪದಕ ಗೆದ್ದು ಸ್ಫೂರ್ತಿಯಾಗಿದ್ದಾರೆ.