ಕೊರೊನಾ ವೈರಸ್ ಅಬ್ಬರದ ಹಿನ್ನೆಲೆಯಲ್ಲಿ ಪಿಯುಸಿ ಪರೀಕ್ಷೆ ಬರೆಯದೇ ಪಾಸ್ ಆಗಿದ್ದಕ್ಕೆ ತುಮಕೂರಿನಲ್ಲಿ ಪಿಯುಸಿ ವಿದ್ಯಾರ್ಥಿಗಳು ಕುಂಬಳಕಾಯಿ ಹೊಡೆದು ಸಂಭ್ರಮಿಸಿದ್ದಾರೆ.
ತಿಪಟೂರು ನಗರದ ಸರ್ಕಾರಿ ಬಾಲಕರ ಪದವಿಪೂರ್ವ ಕಾಲೇಜಿನ ಗೇಟ್ ಮುಂದೆ ಕುಂಬಳಕಾಯಿ ಹೊಡೆದು, ಪಟಾಕಿ ಸಿಡಿಸಿ ವಿದ್ಯಾರ್ಥಿಗಳು ಸಂಭ್ರಮಾಚರಣೆ ಮಾಡಿದ್ದಾರೆ.
ಸಂಭ್ರಮಾಚರಣೆ ಬಳಿಕ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರಿಗೆ ವಿದ್ಯಾರ್ಥಿಗಳು ಜೈಕಾರ ಹಾಕಿದ್ದು, ವೀಡಿಯೋ ಚಿತ್ರೀಕರಿಸಿ ಅದನ್ನ ರಿಮೇಕ್ ಮಾಡಿ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. 10ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಂಭ್ರಮಾಚರಣೆ ಮಾಡಿರುವ ವೀಡಿಯೋ ವೈರಲ್ ಆಗಿದೆ.
ಕೊರೊನಾ ಆತಂಕ ಹಿನ್ನೆಲೆ ಪರೀಕ್ಷೆಗಳನ್ನ ನಡೆಸದೇ ದ್ವಿತೀಯ ಪಿಯುಸಿ ಪಾಸ್ ಮಾಡಲು ರಾಜ್ಯ ಸರಕಾರ ತೀರ್ಮಾನಿಸಿದೆ. ಇದೇ ವೇಳೆ ರಿಪಿಟರ್ಸ್ ಗಳನ್ನು ಪರಿಗಣಸದೇ ಇರುವುದರಿಂದ ರಾಜ್ಯ ಸರಕಾರ ಗುರುವಾರದವರೆಗೆ ಆದೇಶಕ್ಕೆ ತಡೆಯಾಜ್ಞೆ ನೀಡಿದೆ.