ಮಂಗಳನ ಅಂಗಳದಲ್ಲಿ ಜೀವ ವೈವಿಧ್ಯ?: ಕುತೂಹಲ ಹೆಚ್ಚಿಸುತ್ತಿದೆ ಹೊಸ ಫೋಟೋ

ದುಬೈ: ಅಂಗಾರಕನ ಅಂಗಳವನ್ನು ಸಂಶೋಧಕರು ಕೆದಕುತ್ತಲೇ ಇದ್ದಾರೆ. ಹೀಗೆ ಕೆದಕಿದಷ್ಟು ಮಂಗಳನ ಬಗ್ಗೆ ಹೊಸ ವಿಚಾರಗಳು ಬಯಲಾಗುತ್ತಲೇ ಇವೆ. ಈಗ, ಮಂಗಳನ ಅಂಗಳದಲ್ಲಿ ಜೀವ ವೈವಿಧ್ಯದ ಇದ್ದ ಬಗ್ಗೆ ಮತ್ತಷ್ಟು ಇಂಬು ಕೊಡುವ ಫೋಟೋ ಒಂದು ಸಂಶೋಧಕರಿಗೆ ಲಭ್ಯವಾಗಿದೆ. ಇತ್ತೀಚಿಗಷ್ಟೇ ದುಬೈ ‘ಹೋಪ್ ಪ್ರೋಬ್’ ಎಂಬ ಉಪಗ್ರಹವನ್ನು ಉಡಾಯಿಸಿತ್ತು. ಇದೀಗ ಈ ಉಪಗ್ರಹ ಮಂಗಳನ ಫೋಟೋವೊಂದನ್ನು ಸೆರೆಹಿಡಿದು ರವಾನಿಸಿದೆ.
ಮಂಗಳನ ಅಂಗಳದಲ್ಲಿ ಜೀವಿಗಳ ಬಗ್ಗೆ ಇರುವ ಕುತೂಹಲಕ್ಕೆ ಈ ಫೊಟೋ ಮತ್ತಷ್ಟು ಇಂಬು ನೀಡಿದೆ. ಫೆ.10 ರಂದು ಹೋಪ್ ಪ್ರೋಬ್ ಮಂಗಳನ ಸುಂದರ ಫೊಟೋವನ್ನು ಸೆರೆಹಿಡಿದಿದೆ. ಸೂರ್ಯನ ಬೆಳಕು ಮಂಗಳನ ಮೇಲೆ ಬಿದ್ದಿರುವ ಈ ಫೋಟೋವನ್ನು ಅಬುಧಾಬಿ ರಾಜಕುಮಾರ ತಮ್ಮ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದರು. ಮಂಗಳನ ಉತ್ತರ ಧೃವದಲ್ಲಿರುವ ಅತಿ ದೊಡ್ಡ ಅಗ್ನಿ ಪರ್ವತ ಒಲಂಪಸ್ ಮಾನ್ಸ್ ಈ ಚಿತ್ರದಲ್ಲಿ ಸೆರೆಯಾಗಿದೆ. ಈ ಫೊಟೋದ ಮೂಲಕ ಮಂಗಳ ಗ್ರಹದಲ್ಲಿ ಜೀವ ವೈವಿಧ್ಯವಿರುವುದರ ಬಗ್ಗೆ ಅಧ್ಯಯನ ಮಾಡಲು ಸಂಶೋಧಕರಿಗೆ ಹೆಚ್ಚಿನ ಮಾಹಿತಿ ಲಭ್ಯವಾಗಿದೆ ಎಂದು ಮೂಲಗಳು ಹೇಳಿವೆ.
ಹೋಪ್ ಪ್ರೋಬ್ ಪ್ರತಿ 9 ದಿನಗಳಿಗೊಮ್ಮೆ ಮಂಗಳನ ಚಿತ್ರಗಳನ್ನು ಸೆರೆಹಿಡಿದು ಭೂಮಿಗೆ ರವಾನಿಸಲಿದೆ. ಅಲ್ಲದೇ ಮಂಗಳನ ವಾತಾವರಣದ ಬಗ್ಗೆಯೂ ಅಧ್ಯಯನ ನಡೆಸಿ ಸಂಶೋಧಕರಿಗೆ ಮಾಹಿತಿ ರವಾನಿಸಲಿದೆ. ಹೋಪ್ ಪ್ರೋಬ್ ನ್ನು ಕಳೆದ ಜುಲೈನಲ್ಲಿ ಜಪಾನಿನ ತಾನೆಗಶಿಮದಿಂದ ಉಡಾವಣೆ ಮಾಡಲಾಗಿತ್ತು. ಇದೇ ಫೆ.9ರಂದು ಹೋಪ್ ಪ್ರೋಬ್ ಮಂಗಳನ ಕಕ್ಷೆಯನ್ನು ಯಸಸ್ವಿಯಾಗಿ ಸೇರಿಕೊಂಡಿತ್ತು. ಸದ್ಯ ಈ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.