ವೃದ್ಧೆಯೊಬ್ಬರ ಕಣ್ಣಿನಿಂದ 9 ಸೆಂಟಿ ಮೀಟರ್ ಉದ್ದದ ಜೀವಂತ ಹುಳುವನ್ನು ಶಸ್ತ್ರಚಿಕಿತ್ಸೆ ಮೂಲಕ ಉಡುಪಿಯ ವೈದ್ಯರು ಹೊರ ತೆಗೆದಿದ್ದಾರೆ.
ವೃದ್ದೆಯ ಅಕ್ಷಿ ಪಟಲದ ಸುತ್ತ ಸುತ್ತುತ್ತಿದ್ದ ಜೀವಂತ ಹುಳುವನ್ನು ಉಡುಪಿಯ ಪ್ರಸಾದ್ ನೇತ್ರಾಲಯದ ವೈದ್ಯರು ಈ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿ ಹೊರತೆಗೆದಿದ್ದಾರೆ.
ಕಣ್ಣು ನೋವಿನಿಂದ ಬಳಲುತ್ತಿದ್ದ ಮಲ್ಪೆಯ 70 ವರ್ಷದ ವೃದ್ಧೆಯನ್ನು ಜೂನ್ 1 ರಂದು ಪರೀಕ್ಷಿಸಿದ ವೈದ್ಯರಿಗೆ ಅಕ್ಷಿಪಟಲದ ಸುತ್ತ ಹುಳು ಸಂಚರಿಸುತ್ತಿರುವುದನ್ನು ಗಮನಿಸಿ ಶಾಕ್ ಆಗಿದ್ದಾರೆ. ಹುಳು ಸಾಯಲು ಡಾಕ್ಟರ್ ಕೃಷ್ಣ ಪ್ರಸಾದ್ ಔಷಧಿ ನೀಡಿದ್ದು, ಈ ಔಷಧ ಕಣ್ಣಿಗೆ ಹಾಕುತ್ತಿದ್ದಂತೆ ವೃದ್ದೆಯ ಕಣ್ಣಿನಲ್ಲಿ ನೋವು, ಉರಿ ಕಾಣಿಸಿಕೊಂಡಿದೆ.
ಸೋಮವಾರ ಮತ್ತೆ ವೃದ್ಧೆಯ ಕಣ್ಣಿನಲ್ಲಿ ವಿಪರೀತ ನೋವು ಹಾಗೂ ಉರಿ ಕಾಣಿಸಿಕೊಂಡ ಕಾರಣ, ಆಸ್ಪತ್ರೆಗೆ ದಾಖಲಿಸಲಾಗಿದ್ದು, ತುರ್ತಾಗಿ ಸ್ಪಂದಿಸಿದ ವೈದ್ಯರು, ಶಸ್ತ್ರ ಚಿಕಿತ್ಸೆ ಮೂಲಕ ಜೀವಂತ ಹುಳುವನ್ನು ಹೊರ ತೆಗೆದಿದ್ದಾರೆ.
ನೇತ್ರದ ಒಳ ಪದರದಿಂದ ಇದೇ ಮೊದಲ ಬಾರಿಗೆ ಜೀವಂತ ಹುಳುವನ್ನು ತೆಗೆಯಲಾಗಿದೆ ಎಂದು ವೈದ್ಯರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಮತ್ತಷ್ಟು ಅಧ್ಯಯನಕ್ಕಾಗಿ ಈ ಹುಳುವನ್ನೀಗ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.