ನೆಟ್ಟಿಗರ ಮನ ಕಲಕುತ್ತಿದೆ ಈ ವೃದ್ಧ ದಂಪತಿಯ ಫೋಟೋ..!

ಲಂಡನ್: ವೃದ್ಧ ದಂಪತಿಗಳ ಫೋಟೋ ಒಂದು ನೆಟ್ಟಿಗರ ಮನಕಲುಕುತ್ತಿದೆ. 70 ವರ್ಷ ಸಂಸಾರ ಮಾಡಿದ ಈ ದಂಪತಿ ಸಾವಿಗೂ ಮುನ್ನ ಒಬ್ಬರಿಗೊಬ್ಬರು ಕೈ ಹಿಡಿದುಕೊಂಡ ಫೋಟೋ ಎಂಥವರಿಗೂ ಮರುಕ ಹುಟ್ಟಿಸುತ್ತಿದೆ. ಮದುವೆಯಿಂದ ಮಸಣದವರೆಗೂ ಒಟ್ಟಿಗೆ ಪಯಣಿಸಿದ ವೃದ್ಧ ದಂಪತಿಯ ಫೋಟೋ ಕಂಬನಿ ತರಿಸುತ್ತಿದೆ.
91 ವರ್ಷದ ಮಾರ್ಗರೇಟ್ ಮತ್ತು ಡೆರೆಕ್ ಕೊರೋನಾ ಮಹಾಮಾರಿಯಿಂದ ಲಂಡನ್ ನ ಆಸ್ಪತ್ರೆಯೊಂದರಲ್ಲಿ ಮೃತಪಟ್ಟಿದ್ದಾರೆ. ಸಾಯುವ ಮುನ್ನ ಇಬ್ಬರೂ ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತ ಕೈ ಹಿಡಿದುಕೊಂಡ ಒಟ್ಟಿಗೇ ಕೊನೆಯುಸಿರೆಳೆದಿದ್ದಾರೆ. ಮೊದಲು ಮಾರ್ಗರೇಟ್ ಅವರಿಗೆ ಕೊರೋನಾ ಕಾಣಿಸಿಕೊಂಡಿತು. ಬಳಿಕ ಅವರನ್ನು ಟ್ರಾಫೋರ್ಡ್ ಆಸ್ಪತ್ರೆಗೆ ದಾಖಲಿಸಲಾಯಿತು. ಕೆಲವೇ ದಿನಗಳಲ್ಲಿ ಡೆರೆಕ್ ಅವರಿಗೂ ಕೊರೋನಾ ಸೋಂಕು ಕಾಣಿಸಿಕೊಂಡಿತು. ಡೆರೆಕ್ ರನ್ನು ಮೊದಲು ವೈಥನ್ ಶೇವ್ ಆಸ್ಪತ್ರೆಗೆ ದಾಖಲಿಸಲಾಯಿತು. ಬಳಿಕ ಅವರನ್ನೂ ಟ್ರಾಫೋರ್ಡ್ ಆಸ್ಪತ್ರೆಗೆ ದಾಖಲಿಸಲಾಯಿತು. ಇಬ್ಬರ ಸ್ಥಿತಿ ಗಂಭೀರವಾದಾಗ ದಂಪತಿಯನ್ನು ಒಂದೇ ವಾರ್ಡ್ ಗೆ ಸ್ಥಳಾಂತರಿಸಿ ಅವರ ಆಸೆಯಂತೆ ಅಕ್ಕಪಕ್ಕದ ಬೆಡ್ ಗಳಲ್ಲಿ ಇರಿಸಲಾಯಿತು.
ದಿನಾಲೂ ಒಬ್ಬರನ್ನೊಬ್ಬರು ನೋಡುತ್ತಾ ಇಬ್ಬರೂ ಖುಷಿ ಪಡುತ್ತಿದ್ದರು. ಎಚ್ಚರವಾಗಿದ್ದಾಗಲೆಲ್ಲ ಇಬ್ಬರೂ ಕೈ ಬೆಸೆದುಕೊಂಡೇ ಇರುತ್ತಿದ್ದರು. ಆ ನೋವಿನಲ್ಇಲೂ ಖುಷಿಪಡುತ್ತಿದ್ದರು. ಅಲ್ಲದೇ ಹೀಗೆ ಜೊತೆಯಲ್ಲಿರುವುದು ಅವರಿಗೆ ಮತ್ತಷ್ಟು ಉತ್ತೇಜನ ನೀಡಿತ್ತು. ನಿಜಕ್ಕೂ ಮಾದರಿ ದಂಪತಿ ಎಂದು ಅವರನ್ನು ನೋಡಿಕೊಳ್ಳುತ್ತಿದ್ದ ವೈದ್ಯರು ಹೇಳಿದ್ದಾರೆ. ಇವರಿಬ್ಬರ ಕೊನೆಯ ಫೊಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ನೆಟ್ಟಿಗರು ಕೊರೋನಾ ಮಹಾಮಾರಿಗೆ ಹಿಡಿಶಾಪ ಹಾಕುತ್ತಿದ್ದಾರೆ.