ಲಂಡನ್: ಇದು ವೈದ್ಯರನ್ನೇ ಚಕಿತಗೊಳಿಸಿದ ಕಥೆ. ತಾನು ಗರ್ಭಿಣಿ ಎಂದು ಸಂತಸದಲ್ಲಿದ್ದ ಮಹಿಳೆ ಮತ್ತೊಮ್ಮೆ ಗರ್ಭ ಧರಿಸಿದ್ದಳು. ಇದು ವಿಚಿತ್ರವೆನಿಸಿದರೂ ಸತ್ಯ. ಅಪರೂಪದ ಘಟನೆಗೆ ಲಂಡನ್ ಮೂಲದ ಮಹಿಳೆ ಸಾಕ್ಷಿಯಾಗಿದ್ದಾಳೆ. ಮೂರು ವಾರಗಳ ಗರ್ಭಿಣಿಯಾಗಿದ್ದಾಗ ಈ ಮಹಿಳೆಗೆ ತಾನು ಮತ್ತೊಮ್ಮೆ ಗರ್ಭಿಣಿಯಾದ ಬಗ್ಗೆ ತಿಳಿದಾಗ ದಂಪತಿ ಚಕಿತರಾಗಿದ್ದರು.
ಮದುವೆಯಾಗಿ ವರ್ಷಗಳು ಕಳೆದಿದ್ದರೂ ಈ ದಂಪತಿಗೆ ಮಕ್ಕಳಾಗಿರಲಿಲ್ಲ. ಫರ್ಟಿಲಿಟಿ ಮೆಡಿಕೇಷನ್ ಬಳಿಕ ಕೊನೆಗೆ ರೆಬೆಕಾ ಎಂಬುವವರು ಗರ್ಭ ಧರಿಸಿದ್ದರು. ವೈದ್ಯರು ಈ ಬಗ್ಗೆ ಖಚಿತ ಪಡಿಸಿದಾಗ ದಂಪತಿಯ ಸಂತಸಕ್ಕೆ ಪಾರವೇ ಇರಲಿಲ್ಲ. ರೆಬೆಕಾ ಮೂರು ವಾರಗಳ ಗರ್ಭಿಣಿಯಾಗಿದ್ದಾಗ ಅಲ್ಟ್ರಾಸೌಂಡ್ ಮಾಡಿದ ವೈದ್ಯರಿಗೆ ಅಚ್ಚರಿ ಕಾದಿತ್ತು. ರೆಬೆಕಾ ಮತ್ತೆ ಗರ್ಭ ಧರಿಸಿರುವ ಸುದ್ದಿ ಎಲ್ಲರ ಅಚ್ಚರಿಗೆ ಕಾರಣವಾಗಿತ್ತು.
ಒಂದು ಮಗುವಿನ ಬದಲು ಎರಡು ಮಗುವಿದ್ದದ್ದನ್ನು ಗಮನಿಸಿ ಆಘಾತಕ್ಕೊಳಗಾಗಿದ್ದೆ ಎಂದು ವೈದ್ಯೆ ಹೇಳಿದ್ದಾರೆ. ಈ ಅಪರೂಪದ ಪ್ರಕರಣಕ್ಕೆ ಸೂಪರ್ ಫೆಟೇಷನ್ ಎನ್ನಲಾಗುತ್ತದೆ. ಮೊದಲ ಗರ್ಭಧಾರಣೆಯ ವೇಳೆ ಮತ್ತೊಮ್ಮೆ ಗರ್ಭ ಧರಿಸುವಂತೆ ಮಾಡುತ್ತದೆ. ಈ ಅಸಾಧಾರಣ ಗರ್ಭಧಾರಣೆ ಎರಡು ಪ್ರತ್ಯೇಕ ಸಂದರ್ಭಗಳಲ್ಲಿ ಅಂಡಾಣುಗಳು ಬಿಡುಗಡೆಯಾದ ನಂತರ ಸಂಭವಿಸುತ್ತದೆ ಎಂದು ವೈದ್ಯರು ವಿವರಿಸುತ್ತಾರೆ.
ಸದ್ಯ ರೆಬೆಕಾ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದು ಎರಡೂ ಮಕ್ಕಳು ಆರೋಗ್ಯವಾಗಿವೆ. ರೆಬೆಕಾಳ ಗರ್ಭಾವಸ್ಥೆ ಸವಾಲಿನಿಂದ ಕೂಡಿತ್ತು. ಇನ್ನೊಂದು ಮಗು ಬದುಕುಳಿಯುವ ಸಾಧ್ಯತೆಗಳು ಕಡಿಮೆ ಎಂದು ವೈದ್ಯರು ಹೇಳಿದ್ದರು. ಜನನದ ಬಳಿಕ ಕಿರಿಯ ಮಗು ಎರಡು ತಿಂಗಳು ತೀವ್ರ ನಿಗಾ ಘಟಕದಲ್ಲಿತ್ತು. ಕೊನೆಗೂ ಸೂಪರ್ ಅವಳಿಗಳು ನಮ್ಮ ಮನೆ ಸೇರಿವೆ. ಮಕ್ಕಳಿಲ್ಲದೇ ಮಾನಸಿಕವಾಗಿ ನೊಂದಿದ್ದ ನಮಗೆ ಇದು ಅದೃಷ್ಟವೇ ಸರಿ ಎಂದು ರೆಬೆಕಾ ಪತಿ ರಾಬರ್ಟ್ ಹೇಳಿದ್ದಾರೆ. ಸದ್ಯ ಈ ಅಪರೂಪದ ಕಥೆ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗುತ್ತಿದೆ.